

ಚಿಟಗುಪ್ಪ: ಗುರುಗಳ ಸೇವೆ ಮಾಡುವುದು ಹಣ, ಆಸ್ತಿಗಿಂತ ದೊಡ್ಡದು ಎಂದು ಹಿರೇಮಠ ಸಂಸ್ಥಾನದ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಹೇಳಿದರು.
ಬೇಮಳಖೇಡ ಗ್ರಾಮದಲ್ಲಿ ಆಯೋಜಿಸಿದ್ದ ತಪೋರತ್ನ ಶ್ರೀ ಗುರುಪಾದ ಶಿವಾಚಾರ್ಯರ 5ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿ, ಜನ್ಮ-ಜನ್ಮಾಂತರದ ಪುಣ್ಯವಿದ್ದರೆ ಮಾತ್ರ ಗುರು ಸೇವೆ ಮಾಡಲು ಸಿಗುತ್ತದೆ. ಸೇವೆ ಮಾಡಿ ಗುರು ಕೃಪೆಗೆ ಪಾತ್ರರಾದರೆ ಜೀವನ ಧನ್ಯವಾಗುತ್ತದೆ ಎಂದರು.
ಗುರು ಸೇವೆ ಬೇಡ, ಗುರುವಿನ ಆಸ್ತಿ ಬೇಕೆಂಬ ಅಪಾಯಕಾರಿ ವಾತಾವರಣ ಇಂದು ನಿರ್ಮಾಣವಾಗಿದೆ. ಭೋಗ ಜೀವನ, ಮೋಜು-ಮಸ್ತಿಗಾಗಿ ಕೆಲವರು ಕಾವಿ ಬಟ್ಟೆ ಧರಿಸುತ್ತಿರುವುದು ಧರ್ಮ, ಸಂಸ್ಕೃತಿ, ಪರಂಪರೆಗೆ ದೊಡ್ಡ ಹೊಡೆತ ನೀಡುತ್ತಿದೆ. ಇದು ತ್ಯಾಗದ ಸಂಕೇತವಾಗಿರುವ ಕಾವಿ ವಸ್ತ್ರಕ್ಕೆ ಮಾಡುತ್ತಿರುವ ಘೋರ ಅಪಮಾನ. ಕೆಲವರು ಮಾಡುವ ನೀಚ ಕಾರ್ಯಕ್ಕಾಗಿ ಇಡೀ ಪೂಜ್ಯರ ಸಮುದಾಯದ ತಲೆ ತಗ್ಗಿಸುವಂತಾಗಿದೆ. ಸಮಾಜ ಇಂಥವರನ್ನು ತಿರಸ್ಕರಿಸಬೇಕು ಎಂದು ಕರೆ ನೀಡಿದರು.
ತಪೋರತ್ನ ಶ್ರೀ ಗುರುಪಾದ ಶಿವಾಚಾರ್ಯರು ಕೇವಲ ಗುರುಗಳಲ್ಲ, ಅವರು ಗುರುವಿನ ಗುರು ಸದ್ಗುರುಗಳಾಗಿದ್ದರು. ಇಂಥ ಪೂಜ್ಯರ ಸೇವೆ ಮಾಡುವ ಭಾಗ್ಯ ನಮಗೆ ದೊರೆತಿರುವುದು ಪುಣ್ಯ ಎಂದರು.
ಪ್ರಮುಖರಾದ ರೇವಪ್ಪ ಮುದ್ದಾ, ಶಂಕ್ರೆಪ್ಪ ಬೋರಾಳೆ, ಶಾಮರಾವ ಮಾಸ್ತರ್, ರಾಜಕುಮಾರ ಮಾಳಗೆ, ಮಹಾಂತಯ್ಯ ಸ್ವಾಮಿ, ಬಸವರಾಜ ಕಾರಿ, ರಾಮಶೆಟ್ಟಿ ಮೆಂಗಾ, ಕಾರ್ತಿಕ ಸ್ವಾಮಿ, ಶಿವರುದ್ರಪ್ಪ ಮುದ್ದಾ, ಗುರಪ್ಪ ಸಿಂದೋಲ್, ವೀರಪ್ಪ ಗಾದಗಿ, ಡಾ.ಸುಭಾಷ ಯದಲಾಪುರೆ, ರಾಜಶೇಖರ ದಾಮಾ, ಚಂದ್ರಶೆಟ್ಟಿ ಕರಕನಳ್ಳಿ, ವೈಜಪ್ಪ ಕಾರಿ ಇತರರಿದ್ದರು.