

ಕೊಟ್ಟೂರು: ನಿತ್ಯ ರಾಮತಾರಕ ಮಂತ್ರ ಸ್ಮರಣೆ ಮೂಲಕ ಬದುಕನ್ನ ಸಾರ್ಥಕ ಮಾಡಿಕೊಂಡ ಆದಿಕವಿ ಮಹರ್ಷಿ ವಾಲ್ಮೀಕಿ ಅವರು ಆತ್ಮ ಕಲ್ಯಾಣದೊಂದಿಗೆ ಲೋಕ ಕಲ್ಯಾಣಕ್ಕಾಗಿ ರಾಮಯಣ ಮಹಾಕಾವ್ಯ ರಚನೆ ಮಾಡಿದ್ದಾರೆ. ಈ ಮೂಲಕ ರಾಷ್ಟ್ರ, ದೈವ ಹಾಗೂ ರಾಜಕೀಯ ಪ್ರಜ್ಞೆಯ ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ್ದಾರೆ ಎಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದ ಗದ್ದುಗೆ ಮಠದ ಆವರಣದಲ್ಲಿ ಶ್ರೀ ವಾಲ್ಮೀಕಿ ನವ ಯುವಕ ಸಮಾಜ ಸೇವಾಸಂಘದಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಂಗಳವಾರ ಆಶೀರ್ವಚನ ನೀಡಿದರು. ಅಧಿಕಾರ, ಆಸ್ತಿಗಾಗಿ ಅಣ್ಣ ತಮ್ಮಂದಿರ ತ್ಯಾಗವೇ ರಾಮಾಯಣ ಎಂಬುದನ್ನ ಮಹರ್ಷಿ ವಾಲ್ಮೀಕಿ ಜಗತ್ತಿಗೆ ಸಾರಿದರು. ಆಧುನಿಕ ಜಗತ್ತಿನಲ್ಲಿ ಅಧಿಕಾರ ಮತ್ತು ಆಸ್ತಿಗಾಗಿ ಕುಟುಂಬಗಳಲ್ಲಿ ನಿತ್ಯ ಮಹಾಭಾರತ ಸೃಷ್ಟಿಯಾಗುತ್ತಿದ್ದು, ಇದು ಬದಲಾಗಬೇಕು. ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಿ ಎಂದರು.
ವಾಲ್ಮೀಕಿ ಸಮುದಾಯದ ಪ್ರಮುಖ ಸೂರ್ಯಪಾಪಣ್ಣ ಮಾತನಾಡಿ, ಪ್ರಸನ್ನಾನಂದಪುರಿ ಸ್ವಾಮೀಜಿ ಸಮುದಾಯಕ್ಕೆ ಶೇ.7 ಮೀಸಲಾತಿ ಕಲ್ಪಿಸಲು ಹಗಲಿರುಳು ಶ್ರಮಿಸಿದ್ದಾರೆ. ರಾಜ್ಯ ಸರ್ಕಾರ ಇದೀಗ ಅನ್ಯ ಸಮುದಾಯವನ್ನು ಎಸ್ಟಿಗೆ ಸೇರಿಸಿ ವಾಲ್ಮೀಕಿ ಸಮುದಾಯಕ್ಕೆ ಕನ್ನ ಹಾಕುವ ಹುನ್ನಾರ ನಡೆಸಿದ್ದು, ಈ ಬಗ್ಗೆ ವಾಲ್ಮೀಕಿ ಸಮುದಾಯದ 16 ಶಾಸಕರು ಸದನದಲ್ಲಿ ಧ್ವನಿ ಎತ್ತಬೇಕು ಎಂದರು.
ಬಳ್ಳಾರಿ ವಿಎಸ್‌ಕೆ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಸಹಾಯಕ ಕುಲಸಚಿವ ಡಾ.ಗೋಪಾಲ್ ಎನ್. ಮಾತನಾಡಿ, ಎಲ್.ಜಿ ಹಾವನೂರು ಈ ಸಮುದಾಯದ ರತ್ನವಾಗಿದ್ದು, ಅಂತಹವರ ಇತಿಹಾಸ ತಿಳಿಯಬೇಕು. ವಾಲ್ಮೀಕಿ ಕೇರಿಗಳಲ್ಲಿ ಸಾರಾಯಿ ಅಂಗಡಿ ಬದಲಾಗಿ ಗ್ರಂಥಾಲಯ ಸ್ಥಾಪಿಸಬೇಕು. ದೇವದಾಸಿ ಪದ್ಧತಿಯಿಂದ ಹೊರಬರಬೇಕೆಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ್ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಡೋಣೂರು ಚಾನುಕೋಟಿ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್, ದಲಿತ ಸಂಗರ್ಷ ಸಮಿತಿ ಪ್ರಮುಖ ಬದ್ದಿ ಮರಿಸ್ವಾಮಿ, ತಾಲೂಕು ವಾಲ್ಮೀಕಿ ಸಂಘದ ಕಾರ್ಯದರ್ಶಿ ಡಾ.ಎಚ್.ಕೊಟ್ರೇಶ, ಶಿಕ್ಷಕ ಜಾತಪ್ಪ ವಿ., ಪಪಂ ಅಧ್ಯಕ್ಷೆ ಬದ್ದಿ ರೇಖಾ ರಮೇಶ್, ಉಪಾಧ್ಯಕ್ಷ ಜಿ.ಸಿದ್ಧಯ್ಯ, ಸ್ಥಾತಿ ಸಮಿತಿ ಅಧ್ಯಕ್ಷ ಅಂಜಿನಮ್ಮ ವಿರೂಪಾಕ್ಷಿ, ಮುಖ್ಯಾಧಿಕಾರಿ ಎ.ನಸರುಲ್ಲಾ, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಚಾಪಿ ಚಂದ್ರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ, ಪಪಂ ಸದಸ್ಯರಾದ ಬಾವಿಕಟ್ಟಿ ಶಿವಾನಂದ, ತೋಟದ ರಾಮಣ್ಣ, ವಾಲ್ಮೀಕಿ ರಾಜ್ಯ ಪ್ರಶಸ್ತಿ ಪುರಸ್ಕೃತ ಉಚ್ಚಂಗಪ್ಪ,ಪಕ್ಕೀರಪ್ಪ, ಬಿಎಸ್‌ಆರ್ ಮೂಗಣ್ಣ, ಮಲ್ಲಿಕಾರ್ಜುನ್ ಇತರರಿದ್ದರು. ನಂತರ ಮಹರ್ಷಿ ವಾಲ್ಮೀಕಿ ಹಾಗೂ ಮದಕರಿನಾಯಕ ಅವರ ಭಾವಚಿತ್ರದ ಮೆರವಣಿಗೆ ಪಟ್ಟಣದಲ್ಲಿ ನಡೆಯಿತು.