ಆಸ್ತಿಗಳ ಡ್ರೋನ್ ಸರ್ವೇಗೆ ಸಹಕರಿಸಿ

28 HANUR 2
Published on

ಹನೂರು: ಇ-ಸ್ವತ್ತು ಸಮಸ್ಯೆಯಿಂದ ಮುಕ್ತಿ ಹೊಂದಲು ಹಾಗೂ ಪ್ರತಿಯೊಬ್ಬರೂ ನಿಖರ ದಾಖಲೆಯನ್ನು ಹೊಂದುವ ಸಲುವಾಗಿ ವಸತಿ ಪ್ರದೇಶಗಳನ್ನು ಡ್ರೋನ್ ಮೂಲಕ ಸರ್ವೇ ಮಾಡಲಾಗುತ್ತಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.

ತಾಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ಭೂ ಮಾಪನ ಇಲಾಖೆ ಹಾಗೂ ಗ್ರಾಪಂ ವತಿಯಿಂದ ಸ್ವಾಮಿತ್ವ ಯೋಜನೆಯ ಅನುಷ್ಠಾನ ಸಂಬಂಧ ಆಯೋಜಿಸಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಕಂದಾಯ ಇಲಾಖೆ ತೆರಿಗೆಯನ್ನು ವಸೂಲು ಮಾಡುವ ಸಲುವಾಗಿ ವಸತಿ ಪ್ರದೇಶಗಳನ್ನು ಗುರುತಿಸಿ ದಾಖಲಿಸಿತ್ತು. ಆದರೆ ಆಯಾ ಗ್ರಾಮ ಠಾಣಾ ವ್ಯಾಪ್ತಿಯ ವಸತಿ ಪ್ರದೇಶಗಳಿಗೆ ಹೆಚ್ಚಿನ ಒತ್ತು ನೀಡಿ ಸರ್ವೇ ಕಾರ್ಯ ನಡೆಸಿ ನಿಖರ ದಾಖಲೆಗಳನ್ನು ಸಂಗ್ರಹಿಸಿರಲಿಲ್ಲ. ಬಳಿಕ ಇ ಸ್ವತ್ತು ಮೂಲಕ ನಿಖರ ಆಸ್ತಿ ವಿವರ ಹೊಂದುವಂತಾಗಿತ್ತು. ಆದರೂ ಇದರಿಂದ ಜನರು ಸಮಸ್ಯೆಯನ್ನು ಎದುರಿಸುತ್ತಿದ್ದರು. ಆಸ್ತಿ ಬದಲಾವಣೆ ಹಾಗೂ ಸರ್ಕಾರದಿಂದ ಸಿಗುವ ಸಲವತ್ತುಗಳನ್ನು ಪಡೆದುಕೊಳ್ಳಲು ತುಂಬಾ ಸಮಸ್ಯೆಯಾಗಿತ್ತು. ಹಾಗಾಗಿ ಇದನ್ನು ಬಗೆಹರಿಸುವ ಸಲುವಾಗಿ ವಿನೂತನ ಸ್ವಾಮಿತ್ವ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮಗಳಿಗೂ ಈ ಯೋಜನೆ ವಿಸ್ತರಣೆಯಾಗಲಿದ್ದು, ಈ ಯೋಜನೆಯಡಿ ವಸತಿ ಪ್ರದೇಶಗಳನ್ನು ಡ್ರೋನ್ ಮೂಲಕ ಕಂದಾಯ ಹಾಗೂ ಗ್ರಾಪಂ ಸಿಬ್ಬಂದಿ ತಂಡದಿಂದ ಸರ್ವೇ ನಡೆಯಲಿದೆ. ಆದ್ದರಿಂದ ಈ ವೇಳೆ ಪ್ರತಿಯೊಬ್ಬರೂ ಸ್ಥಳದಲ್ಲಿದ್ದು ಅಗತ್ಯ ಮಾಹಿತಿ ನೀಡುವುದರ ಮೂಲಕ ಸಹಕರಿಸಬೇಕು ಎಂದರು.

ಸರ್ವೇ ಬಳಿಕ ಸಂಪೂರ್ಣ ಆಸ್ತಿ ವಿವರವನ್ನು ಹೊಂದಿದ ನಿಖರ ದಾಖಲೆಯುಳ್ಳ ಪಿಆರ್ ಕಾರ್ಡನ್ನು ನೀಡಲಾಗುತ್ತದೆ. ಇದು ಶಾಶ್ವತ ದಾಖಲೆಯಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಸವಲತ್ತು ಪಡೆದುಕೊಳ್ಳಲು ಮುಖ್ಯ ದಾಖಲೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ಯೋಜನೆಯ ಪ್ರಯೋಜನ ಪಡೆದುಕೊಂಡು ನಿಖರ ದಾಖಲೆ ಹೊಂದಬೇಕು ಎಂದು ತಿಳಿಸಿದರು.

ಬೂದು ನೀರು ನಿರ್ವಹಣಾ ಘಟಕ

ಇನ್ನು ಈ ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಅಶುಚಿತ್ವ ತಾಂಡವಾಡುತ್ತಿದೆ. ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಇದನ್ನು ಮನಗಂಡು 3.63 ಕೋಟಿ ರೂ. ವೆಚ್ಚದಲ್ಲಿ ಬೂದು ನೀರು ನಿರ್ವಹಣಾ ಘಟಕ ಸ್ಥಾಪನೆಗೆ ಕ್ರಮ ವಹಿಸಿದ್ದು, ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯ ಅನುಷ್ಠಾನಗೊಳ್ಳಲಿದೆ. ಇನ್ನು ಈ ಮಾರ್ಗದ ರಸ್ತೆಯು ಮ.ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿರುವುದರಿಂದ ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ. ಈ ದಿಸೆಯಲ್ಲಿ ಈಗಾಗಲೇ ಗ್ರಾಮಸ್ಥರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗಿದೆ. ಆದ್ದರಿಂದ ರಸ್ತೆ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.

ಜನಪ್ರತಿನಿಧಿಗಳ ಗೈರು, ಬೇಸರ: ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಗೈರಾಗಿದ್ದರು. ಜತೆಗೆ ಜನರ ಕೊರತೆಯೂ ಕಂಡು ಬಂತು. ಇದನ್ನು ಗಮನಿಸಿದ ಶಾಸಕರು ಬೇಸರ ವ್ಯಕ್ತಪಡಿಸಿದರು. ರಾಜಕಾರಣವನ್ನು ರಾಜಕೀಯವಾಗಿ ಎದುರಿಸಬೇಕೇ ವಿನಾ ಸಾರ್ವಜನಿಕರ ಕೆಲಸದ ವಿಚಾರದಲ್ಲಿ ಅಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಬೇಕು ಎಂದರು. ಸಭೆಯಲ್ಲಿ ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ನಟರಾಜು, ಮೇಲ್ವಿಚಾಕರ ಚೇತನ್, ತಾಪಂ ಸಹಾಯಕ ನಿರ್ದೇಶಕಿ ರಾಧಾ, ಪಿಡಿಒ ಆಕಾಶ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net