ಆಸ್ತಿ ತೆರಿಗೆ ಹೊರೆ ಇಳಿಕೆ

mayor badiger
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಆಸ್ತಿ ತೆರಿಗೆದಾರರು ಹಾಗೂ ವಾಣಿಜ್ಯೋದ್ಯಮಿಗಳ ಆಕ್ರೋಶಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕೊನೆಗೂ ಮಣಿದಿದೆ. ವಿಪರೀತವಾಗಿ ಹೆಚ್ಚಳ ಮಾಡಿದ್ದ 2025-26ರ ಸಾಲಿನ ಆಸ್ತಿ ತೆರಿಗೆಯಲ್ಲಿ ಒಂದಿಷ್ಟು ರಿಯಾಯಿತಿ ಪ್ರಕಟಿಸುವ ಮೂಲಕ ಜನತೆಯ ಮೇಲಿನ ಹೊರೆ ಇಳಿಸಿದೆ.

ಆಸ್ತಿಯ ವಿಸ್ತೀರ್ಣ ಹಾಗೂ ಸ್ವರೂಪ (ವಸತಿ, ವಸತಿಯೇತರ ಹಾಗೂ ವಾಣಿಜ್ಯ)ಕ್ಕೆ ಅನುಗುಣವಾಗಿ ಪ್ರಸಕ್ತ ಸಾಲಿನಲ್ಲಿ ವಿಧಿಸಲಾಗಿದ್ದ ಯುಜಿಡಿ (ಒಳಚರಂಡಿ) ಬಳಕೆ ಶುಲ್ಕವನ್ನು ಸಂಪೂರ್ಣವಾಗಿ ಕೈ ಬಿಟ್ಟಿದೆ. ಈ ಮೊದಲಿದ್ದ ಎಸ್​ಡಬ್ಲ್ಯುಎಂ ಸೆಸ್ (ಘನತ್ಯಾಜ್ಯ ನಿರ್ವಹಣೆ ಉಪ ಕರ) ಸಹ ತೆಗೆದು ಹಾಕಲಾಗಿದೆ. ವಸತಿ ಕಟ್ಟಡಗಳ ಮಾಲೀಕರು 360 ರೂ. ಹಾಗೂ ವಾಣಿಜ್ಯ ಕಟ್ಟಡಗಳ ಮಾಲೀಕರು 600 ರೂ. ವರ್ಷಕ್ಕೆ ಎಸ್​ಡಬ್ಲ್ಯುಎಂ ಸೆಸ್ ಪಾವತಿಸಬೇಕಿತ್ತು.

ಈ ಬಾರಿ ಸೇರ್ಪಡೆ ಮಾಡಲಾಗಿರುವ ಎಸ್​ಡಬ್ಲ್ಯುಎಂ ಬಳಕೆ ಶುಲ್ಕ ಯಥಾಸ್ಥಿತಿ ಮುಂದುವರಿಯಲಿದೆ. ಆಸ್ತಿಯ ವಿಸ್ತೀರ್ಣ ಹಾಗೂ ಸ್ವರೂಪ (ವಸತಿ, ವಸತಿಯೇತರ ಹಾಗೂ ವಾಣಿಜ್ಯ)ಕ್ಕೆ ಅನುಗುಣವಾಗಿ ಆಸ್ತಿ ಮಾಲೀಕರು 600ರಿಂದ 12,000 ರೂ. ವರೆಗೆ ಎಸ್​ಡಬ್ಲ್ಯುಎಂ ಬಳಕೆ ಶುಲ್ಕ ಪಾವತಿಸಬೇಕಾಗುತ್ತದೆ. ಖಾಲಿ ಜಾಗಕ್ಕೆ ನಿಗದಿಪಡಿಸಲಾಗಿದ್ದ ಎಸ್​ಡಬ್ಲ್ಯುಎಂ ಬಳಕೆ ಶುಲ್ಕವನ್ನು 50 ಪೈಸೆಯಿಂದ 25 ಪೈಸೆ(ಪ್ರತಿ ಚದರ ಅಡಿಗೆ)ಗೆ ಇಳಿಕೆ ಮಾಡಲಾಗಿದೆ.

ಮೇ 31 ರವರೆಗೆ ಶೇ. 5ರಷ್ಟು ರಿಯಾಯಿತಿ

ವಿಪರೀತವಾಗಿ ಏರಿಕೆ ಮಾಡಿದ್ದ ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡಿರುವ ಬಗ್ಗೆ ಸೋಮವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಯರ್ ರಾಮಪ್ಪ ಬಡಿಗೇರ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಇಂದು ಬೆಳಗ್ಗೆ ಒಂದೂವರೆ ತಾಸು ಚರ್ಚೆ ಮಾಡಿದ್ದೇವೆ. ಯಾವ ಕಾರಣಕ್ಕೆ ಏರಿಕೆ ಮಾಡಬೇಕಾಯಿತು ಎಂಬುದನ್ನು ವಿವರಿಸಿದ್ದೇವೆ. ಸರ್ಕಾರ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪ್ರಕಟಿಸದ ಸಾಲಿನಲ್ಲಿ ಆಸ್ತಿ ತೆರಿಗೆ ದರವನ್ನು ಶೇ. 3ರಿಂದ 5 ರಷ್ಟು ಏರಿಕೆ ಮಾಡಲು ಅವಕಾಶ ಇರುತ್ತದೆ. ಅದರಂತೆ ಕ್ರಮ ಕೈಗೊಂಡಿದ್ದೇವೆ. ಆಸ್ತಿ ತೆರಿಗೆ ಪಾವತಿ ಮೇಲೆ ಶೇ. 5ರಷ್ಟು ರಿಯಾಯಿತಿಯನ್ನು ಮೇ 31ರವರೆಗೆ ವಿಸ್ತರಿಸಲಾಗುವುದು ಎಂದರು.

ಇದೀಗ ಯುಜಿಡಿ ಶುಲ್ಕ, ಎಸ್​ಡಬ್ಲ್ಯುಎಂ ಸೆಸ್ ಕೈ ಬಿಟ್ಟಿರುವುದರಿಂದ ಹಾಗೂ ಖಾಲಿ ಜಾಗಕ್ಕೆ ಎಸ್​ಡಬ್ಲ್ಯುಎಂ ಬಳಕೆ ಶುಲ್ಕದಲ್ಲಿ ರಿಯಾಯಿತಿ ನೀಡಿರುವುದರಿಂದ ಪಾಲಿಕೆ ಆದಾಯದಲ್ಲಿ 20-25 ಕೋಟಿ ರೂ. ಕೊರತೆ ಆಗಲಿದೆ. ಇಂದಿನ ನಿರ್ಣಯಗಳನ್ನು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಮೂಲಕ ರಾಜ್ಯ ಸರ್ಕಾರಕ್ಕೆ ಬರೆಯುತ್ತೇವೆ. ಅವಳಿ ನಗರದಲ್ಲಿ ಸಂಪೂರ್ಣವಾಗಿ ಒಳಚರಂಡಿ ಕೊಳವೆ ಮಾರ್ಗ ಅಳವಡಿಸಿದ ಮೇಲೆ ಯುಜಿಡಿ ಬಳಕೆ ಶುಲ್ಕ ಆಕರಿಸಬೇಕೆಂದು ಸಹ ಸರ್ಕಾರವನ್ನು ಕೋರುತ್ತೇವೆ ಎಂದು ತಿಳಿಸಿದರು.

ಇಂದಿನ ರಿಯಾಯಿತಿಯು ತಾತ್ಕಾಲಿಕವಾಗಿದ್ದು, 2025-26ನೇ ಸಾಲಿಗೆ ಮಾತ್ರ ಅನ್ವಯವಾಗುತ್ತದೆ. ಮುಂದಿನ ವರ್ಷ ಪುನಃ ಪರಿಷ್ಕರಣೆ ಆಗಲಿದೆ. ಈಗಾಗಲೇ ಪ್ರಸಕ್ತ ಸಾಲಿನಲ್ಲಿ 19 ಕೋಟಿ ರೂ. ಆಸ್ತಿ ತೆರಿಗೆ ಪಾವತಿಯಾಗಿದೆ. ಹೆಚ್ಚುವರಿ ಮೊತ್ತವನ್ನು ಮುಂದಿನ ವರ್ಷಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಅವಳಿ ನಗರದಲ್ಲಿ ಖಾಲಿ ಜಾಗ ಸ್ವಚ್ಛತೆಗೆ ಕಳೆದ ವರ್ಷ 7 ಕೋಟಿ ರೂ. ವೆಚ್ಚ ಮಾಡಿದ್ದೇವು. ಅದನ್ನು ಆಸ್ತಿ ಮಾಲೀಕರು ಪಾವತಿಸಿಲ್ಲ. ಹಾಗಾಗಿ ಈ ವರ್ಷ ಖಾಲಿ ಜಾಗಕ್ಕೆ ಎಸ್​ಡಬ್ಲ್ಯುಎಂ ಬಳಕೆ ಶುಲ್ಕ ವಿಧಿಸಿದ್ದೇವೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪ ಮೇಯರ್ ದುರ್ಗಮ್ಮ ಬಿಜವಾಡ, ಸಭಾನಾಯಕ ವೀರಣ್ಣ ಸವಡಿ, ವಿಪಕ್ಷ ನಾಯಕ ರಾಜಶೇಖರ ಕಮತಿ, ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಶಿವು ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net