ಆಸ್ತಿ ತೆರಿಗೆ ಹೆಚ್ಚಳ ಕೈ ಬಿಡಿ

HDMC edit
Published on

ಧಾರವಾಡ: ಹು-ಧಾ ಮಹಾನಗರ ಪಾಲಿಕೆ ಇತ್ತೀಚೆಗೆ ಪರಿಷ್ಕರಣೆ ಮಾಡಿರುವ ಆಸ್ತಿ ತೆರಿಗೆಯನ್ನು ಹಿಂಪಡೆಯುವಂತೆ ಕೋರಿ ಬಿಜೆಪಿ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರಿಗೆ ಬುಧವಾರ ಮನವಿಪತ್ರ ಸಲ್ಲಿಸಿದರು. ಲಾಕ್​ಡೌನ್​ನಿಂದ ಜನರ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಇದರಿಂದ ಹೊರಬರಲು ಸಾಕಷ್ಟು ಸಮಯ ಬೇಕಿದೆ. ಇಂತಹ ಸಂದರ್ಭದಲ್ಲಿ ಪಾಲಿಕೆಯು ಆಸ್ತಿ ತೆರಿಗೆ ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಏಳೆದಂತಾಗಿದೆ. ಹೀಗಾಗಿ ತೆರಿಗೆ ಹೆಚ್ಚಳ ಮಾಡಿದ್ದನ್ನು ಹಿಂಪಡೆದು ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಕೇವಲ ಹೆಚ್ಚಳ ಮಾಡಿರುವ ಆಸ್ತಿ ಕರವನ್ನು ಹಿಂಪಡೆಯುವುದು ಮಾತ್ರವಲ್ಲದೆ, ಈ ಬಾರಿಯ ಆಸ್ತಿ ತೆರಿಗೆ ಪಾವತಿ ಮಾಡಲು ಕೆಲವು ದಿನಗಳ ಕಾಲಾವಕಾಶ ನೀಡಬೇಕು. ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಹೀಗಾಗಿ ಬೇಡಿಕೆಗಳಿಗೆ ಶೀಘ್ರದಲ್ಲಿ ಸ್ಪಂದನೆ ನೀಡಬೇಕು ಎಂದು ಮನವಿ ಮಾಡಿದರು. ಇದುವರೆಗೆ ಸಂಘ ಸಂಸ್ಥೆಯವರು, ಬೇರೆ ಪಕ್ಷದವರು ಆಸ್ತಿ ತೆರಿಗೆ ಹೆಚ್ಚಳ ಕೈಬಿಡುವಂತೆ ಆಗ್ರಹಿಸಿದ್ದಾರೆ. ಈ ವಿಷಯದಲ್ಲಿ ಬಿಜೆಪಿ ಪದಾಧಿಕಾರಿಗಳೇ ಬಹಿರಂಗವಾಗಿ ಅರ್ಜಿ ಸಲ್ಲಿಸಿರುವುದು ಇದೇ ಮೊದಲು. ಪಾಲಿಕೆ ಮಾಜಿ ಸದಸ್ಯರಾದ ವಿಜಯಾನಂದ ಶೆಟ್ಟಿ, ಶಿವು ಹಿರೇಮಠ, ಸಂಜಯ ಕಪಟಕರ, ವೀರಣ್ಣ ಸವಡಿ, ಸುಧೀರ ಸರಾಫ, ಪ್ರಕಾಶ ಗೊಡಗೋಲೆ, ಡಿ.ಕೆ. ಚವ್ಹಾಣ, ತಿಪ್ಪಣ್ಣ ಮಜ್ಜಗಿ, ಪೂರ್ಣಾ ಪಾಟೀಲ, ಬಲರಾಮ ಕುಸುಗಲ್, ಬಸವರಾಜ ಮುತ್ತಳ್ಳಿ, ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ಸಂತೋಷ ಚವ್ಹಾಣ, ಸುರೇಶ ಬೇದರೆ, ಮೋಹನ ರಾಮದುರ್ಗ, ಬಸವರಾಜ ಗರಗ, ಸುನೀಲ ಮೋರೆ, ಶಿವು ಹೂಗಾರ, ಶರಣು ಬೆನಕೊಪ್ಪ, ಇತರರು ಇದ್ದರು.

ಎಸ್​ಯುುಸಿಐ ಪ್ರತಿಭಟನೆ: ಕರೊನಾ ಲಾಕ್​ಡೌನ್​ನ ಸಂಕಷ್ಟಮಯ ಸಂದರ್ಭದಲ್ಲಿ ಹು-ಧಾ ಮಹಾನಗರ ಪಾಲಿಕೆಯು ಅಪ್ರಜಾತಾಂತ್ರಿಕವಾಗಿ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಎಸ್​ಯುುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯಿಂದ ನಗರದ ಪಾಲಿಕೆ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು. ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಗಂಗಾಧರ ಬಡಿಗೇರ ಮಾತನಾಡಿ, ಇಡೀ ದೇಶ ಕರೊನಾ ವೈರಸ್ ಹಾವಳಿಗೆ ತುತ್ತಾಗಿ ಲಾಕ್​ಡೌನ್​ಗೊಳಗಾಗಿದೆ. ದುಡಿಯುವ ಜನರು ಆದಾಯ ಕಳೆದುಕೊಂಡಿದ್ದಾರೆ. ಕಂಗೆಟ್ಟಿರುವ ಜನರಿಗೆ ತೆರಿಗೆ ಹೊರೆ ಹಾಕಿರುವುದು ಅಮಾನವೀಯ ಕ್ರಮ. ಪಾಲಿಕೆಯು ಜನರ ತೆರಿಗೆ ಹಣ ಸಂಗ್ರಹಿಸಿ ಮೂಲ ಸೌಕರ್ಯ ಕಲ್ಪಿಸದಿರುವುದು ಖಂಡನೀಯ. ನೌಕರರಿಗೆ ವೇತನ ನೀಡಲು ತೆರಿಗೆ ಹೆಚ್ಚಳ ಅನಿವಾರ್ಯ ಎಂದು ಪಾಲಿಕೆ ಆಯುಕ್ತರು ಹೇಳುತ್ತಾರೆ. ನೌಕರರ ವೇತನ ಮತ್ತು ನಿರ್ವಹಣೆಗೆ ರಾಜ್ಯ, ಕೇಂದ್ರ ಸರ್ಕಾರಗಳಿಂದ ಹೆಚ್ಚಿನ ಅನುದಾನ ಕೇಳಲಿ. ಅದು ಬಿಟ್ಟು ಜನರನ್ನು ಇನ್ನಷ್ಟು ಸುಲಿಗೆ ಮಾಡುವ ಕ್ರಮ ಸರಿಯೇ? ಎಂದು ಪ್ರಶ್ನಿಸಿದರು. ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಲಕ್ಷ್ಮಣ ಜಡಗಣ್ಣವರ, ಶರಣಬಸವ ಗೋನವಾರ, ಭವಾನಿಶಂಕರ, ಹನುಮೇಶ ಹುಡೇದ, ಮಹಾಂತೇಶ, ವಿಜಯಲಕ್ಷ್ಮೀ, ರಣಜಿತ್, ಶಶಿಕಲಾ, ರಾಬುನ್​ಬೀ, ಅಲ್ಲಾಭಕ್ಷ ಕಿತ್ತೂರ, ರಫೀಕ್, ಪ್ರಕಾಶ, ಇತರರಿದ್ದರು.

ಆಸ್ತಿ ತೆರಿಗೆ ಶೇ. 20ರಷ್ಟು ಕಡಿಮೆ ಮಾಡಿ: 2020-21ನೇ ಸಾಲಿಗೆ 2 ಬಾರಿ ಪರಿಷ್ಕರಿಸಿರುವ ಆಸ್ತಿ ತೆರಿಗೆ ದರ ಹೆಚ್ಚಳವನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಕಳೆದ ಸಾಲಿಗಿಂತ ಶೇ. 20ರಷ್ಟು ಕಡಿಮೆ ಮಾಡಬೇಕು ಎಂದು ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಗ್ರಹಿಸಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದೆ. ಶೇ. 5ರಷ್ಟು ರಿಯಾಯಿತಿ ಪಡೆಯುವ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿದೆ. ಸಂಸ್ಥೆಯಲ್ಲಿ ಮಂಗಳವಾರ ವಿವಿಧ ಸಂಘ ಸಂಸ್ಥೆಗಳು, ಕರದಾತರು, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಎನ್​ಕೆಎಸ್​ಎಸ್​ಐ, ಚಿತ್ರಮಂದಿರಗಳ ಮಾಲೀಕರು, ಜವಳಿ ವ್ಯಾಪಾರಸ್ಥರು, ಆಟೋಮೊಬೈಲ್ ಬಿಡಿಭಾಗಗಳ ಮಾರಾಟಗಾರರು, ರಾಣೆಬೆನ್ನೂರು, ಗದಗ, ಧಾರವಾಡ, ಹೊಸಪೇಟೆ, ಬಳ್ಳಾರಿ ಹಾಗೂ ಹುಬ್ಬಳ್ಳಿಯ ಉದ್ದಿಮೆದಾರರು ಸಭೆ ಸೇರಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net