ಆಸ್ತಿ ತೆರಿಗೆ ಪಾವತಿಸಲು ಕೆಸಿಸಿಐ ಕರೆ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಪರೀತವಾಗಿ ಏರಿಕೆ ಮಾಡಿದ್ದ ಆಸ್ತಿ ತೆರಿಗೆಯಲ್ಲಿ ಕೆಲವೊಂದಿಷ್ಟು ಪರಿಷ್ಕರಣೆ ಮಾಡಿರುವುದರಿಂದ ಇಲ್ಲಿಯವರೆಗೆ ಹಿಂದೇಟು ಹಾಕಿದ್ದ ಅವಳಿ ನಗರದ ಆಸ್ತಿ ಮಾಲೀಕರು ಆಸ್ತಿ ಕರ ಪಾವತಿಸುವಂತೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ)ಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಆಸ್ತಿ ತೆರಿಗೆ ಹೆಚ್ಚಳದ ಹಿನ್ನೆಲೆಯಲ್ಲಿ ಕಳೆದ ವಾರ ಕೆಸಿಸಿಐ ನೇತೃತ್ವದಲ್ಲಿ ಕರೆಯಲಾಗಿದ್ದ ತೆರಿಗೆದಾರರು, ವಾಣಿಜ್ಯೋದ್ಯಮಿಗಳು ಹಾಗೂ ಸಾರ್ವಜನಿಕರ ಸಭೆಯಲ್ಲಿ ಆಸ್ತಿ ತೆರಿಗೆ ಪಾವತಿ ಬಹಿಷ್ಕರಿಸಲು ಹಾಗೂ ಹುಬ್ಬಳ್ಳಿ-ಧಾರವಾಡ ಬಂದ್​ಗೆ ಕರೆ ನೀಡುವ ಎಚ್ಚರಿಕೆ ಪ್ರತಿಧ್ವನಿಸಿದ್ದವು.

ಕೆಸಿಸಿಐ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ, ಸದಸ್ಯರು ಹಾಗೂ ಆಯುಕ್ತ ಡಾ. ರುದ್ರೇಶ ಘಾಳಿ, ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಇಂದು ಚರ್ಚೆ ನಡೆಸಿದ್ದು, ಒಮ್ಮತದ ಅಭಿಪ್ರಾಯಕ್ಕೆ ಬರಲಾಗಿದೆ. ಯುಜಿಡಿ ಬಳಕೆ ಶುಲ್ಕ ಹಾಗೂ ಎಸ್​ಡಬ್ಲ್ಯುಎಂ ಸೆಸ್ ಸಂಪೂರ್ಣ ಕೈಬಿಟ್ಟಿರುವುದನ್ನು ಸ್ವಾಗಸಿಸುತ್ತೇವೆ. ಶೇ. 5ರಷ್ಟು ರಿಯಾಯಿತಿ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಲು ಪಾಲಿಕೆ ಒಪ್ಪಿದೆ. ಹಾಗಾಗಿ ಅವಳಿ ನಗರದ ಜನತೆ 2-3 ದಿನಗಳಲ್ಲಿ ಪಾಲಿಕೆಯು ನೀಡುವ ಪರಿಷ್ಕೃತ ಚಲನ್ ಪಡೆದು ಆಸ್ತಿ ತೆರಿಗೆ ಪಾವತಿಸಬೇಕೆಂದು ಕೋರಿದ್ದಾರೆ.

ನಮ್ಮೆಲ್ಲರ ಒತ್ತಾಯದ ಮೇಲೆ ಆಸ್ತಿ ತೆರಿಗೆಯಲ್ಲಿ ಪರಿಷ್ಕರಣೆ ಮಾಡಿರುವುದು ತಾತ್ಕಾಲಿಕ ಕ್ರಮ ಎಂಬುದು ನಮ್ಮ ನಡುವಿನ ಇಂದಿನ ಚರ್ಚೆಯ ಸಂದರ್ಭದಲ್ಲಿ ಪ್ರಸ್ತಾಪವಾಗಿರಲಿಲ್ಲ. ತಾತ್ಕಾಲಿಕ ಎಂಬುದಾಗಿದ್ದರೆ ನಾವು ಒಪ್ಪುತ್ತಿರಲಿಲ್ಲ. ಈ ಕುರಿತು ತಕ್ಷಣ ಮೇಯರ್ ರಾಮಪ್ಪ ಬಡಿಗೇರ ಅವರಿಗೆ ಶಂಕರಣ್ಣ ಮುನವಳ್ಳಿ ಕರೆ (ಮೊಬೈಲ್ ಫೋನ್ ಮೂಲಕ) ಮಾಡಿ ಸ್ಪಷ್ಟನೆ ಕೇಳಿದರು.

‘‘ಆಸ್ತಿ ತೆರಿಗೆಯಲ್ಲಿ ಇದೀಗ ನೀಡಿರುವ ರಿಯಾಯಿತಿಯು ನಿರಂತರವಾಗಿರಬೇಕು. ನೀವು ತಾತ್ಕಾಲಿಕ ಎಂದು ಹೇಳುವ ಅವಶ್ಯಕತೆ ಇರಲಿಲ್ಲ. ಹಾಗೇನಾದರೂ ಇದ್ದಲ್ಲಿ, ನಮ್ಮ ಹೋರಾಟ ಮುಂದುವರಿಸಬೇಕಾಗುತ್ತದೆ’’ ಎಂದು ಹೇಳಿದರು.

ಈ ಕುರಿತು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ಸರ್ಕಾರಕ್ಕೆ ಬರೆಯುತ್ತೇವೆ ಎಂದು ಮೇಯರ್ ಅವರಿಂದ ಆಶ್ವಾಸನೆ (ಫೋನ್​ನಲ್ಲಿ) ಪಡೆದ ಮುನವಳ್ಳಿ ಅವರು, ನಮ್ಮ ಮುಂದಿನ ಹೋರಾಟ ಸರ್ಕಾರದ ಜತೆ ಇರಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ರಮೇಶ ಪಾಟೀಲ, ವಿನಯ ಜವಳಿ, ಮಹೇಂದ್ರ ಸಿಂಘಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net