

ಹುಬ್ಬಳ್ಳಿ: ಲಾಕ್ಡೌನ್ ಬಿಸಿಯಿಂದಾಗಿ ಮಹಾನಗರ ಪಾಲಿಕೆಯೂ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಬೊಕ್ಕಸ ಬರಿದಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಆಸ್ತಿ ಕರ ಪಾವತಿಸುವ ಮೂಲಕ ಖಜಾನೆ ಭರ್ತಿ ಮಾಡಿಕೊಡಲು ಮುಂದಾದರೂ, ಹದಗೆಟ್ಟಿರುವ ಆನ್ಲೈನ್ ವ್ಯವಸ್ಥೆಯಿಂದಾಗಿ ಪಾಲಿಕೆಗೆ ದುಡ್ಡು ಬರದಂತಾಗಿದೆ.
ಆಸ್ತಿ ತೆರಿಗೆಯಲ್ಲಿ ವಾಸದ ಕಟ್ಟಡಗಳಿಗೆ ಶೇ. 20ರಷ್ಟು, ವಾಣಿಜ್ಯ ಕಟ್ಟಡಗಳಿಗೆ ಶೇ. 30ರಷ್ಟು, ವಾಸೇತರ- ವಾಣಿಜ್ಯ ಬಳಕೆಯಲ್ಲದ ಕಟ್ಟಡಗಳಿಗೆ ಶೇ. 25ರಷ್ಟು ಹಾಗೂ ಖುಲ್ಲಾ ಜಾಗಗಳಿಗೆ ಶೇ. 30ರಷ್ಟು ಏರಿಕೆ ಮಾಡಿದೆ.
ಲಾಕ್ಡೌನ್ ಸಂಕಷ್ಟದ ಸಮಯದಲ್ಲಿಯೂ ಅನೇಕರು ಆಸ್ತಿ ತೆರಿಗೆ ಪಾವತಿಸಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಮಹಾನಗರ ಪಾಲಿಕೆ ಆಸ್ತಿ ತೆರಿಗೆಯಲ್ಲಿ ಇಳಿಕೆ ಮಾಡಿದರೆ ಭರಿಸಿದ ಹೆಚ್ಚುವರಿ ಹಣ ವಾಪಸ್ ಪಡೆಯಬಹುದು ಅಥವಾ ಮುಂದಿನ ವರ್ಷದ ಆಸ್ತಿ ತೆರಿಗೆಗೆ ಹೊಂದಾಣಿಕೆ ಮಾಡಬಹುದೆಂಬ ಲೆಕ್ಕಾಚಾರ ಸಾರ್ವಜನಿಕರದ್ದು.
ಮೇ 31ರೊಳಗೆ ಆಸ್ತಿ ತೆರಿಗೆ ಪಾವತಿಸಿದಲ್ಲಿ ಶೇ. 5ರಷ್ಟು ರಿಯಾಯಿತಿ ಲಭಿಸುತ್ತದೆ ಎಂಬ ಕಾರಣದಿಂದ ಸಾರ್ವಜನಿಕರು ಆನ್ಲೈನ್ ಮೂಲಕ ತೆರಿಗೆ ಪಾವತಿಗೆ ಪರದಾಡುತ್ತಿದ್ದಾರೆ.
ವಾಟ್ಸ್ ಆಪ್ ಮೂಲಕ ಸಂಬಂಧಿಸಿದ ಆಸ್ತಿಯ ಪಿಐಡಿ ನಂಬರ್ ಕಳುಹಿಸಿ, ಚಲನ್ನ ಪಿಡಿಎಫ್ ಪ್ರತಿಯನ್ನಾದರೂ ಪಡೆಯಬೇಕೆಂದರೆ ಪಾಲಿಕೆ ನೀಡಿರುವ ವಾಟ್ಸ್ಆಪ್ ಸಂಖ್ಯೆಗಳಿಗೆ ಪ್ರತಿಕ್ರಿಯೆ ನೀಡುವವರೇ ಇಲ್ಲ!
ಈ ಮೊದಲು ಸಂಬಂಧಿಸಿದ ವಲಯ ಕಚೇರಿಗೆ ತೆರಳಿ ಚಲನ್ ಪಡೆಯಲು ಸೂಚಿಸಲಾಗಿತ್ತು. ಆದರೆ, ವಲಯ ಕಚೇರಿಯಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆಂದು ಕೇವಲ ಆನ್ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸುವಂತೆ ಅಧಿಕಾರಿಗಳು ಸೂಚಿಸಿದ್ದರು.
ಇದೀಗ ಆನ್ಲೈನ್ ಮೂಲಕ ಪಾವತಿಸಲು ಮುಂದಾದರೂ ಪಾಲಿಕೆಯ ನಿರ್ಲಕ್ಷ್ಯ, ನಿರಾಸಕ್ತಿ ಕಂಡುಬರುತ್ತಿದೆ. ಆನ್ಲೈನ್ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಪಾಲಿಕೆ ಬೊಕ್ಕಸಕ್ಕೆ ಕೋಟ್ಯಂತರ ರೂ. ಬರದಂತಾಗಿದೆ.
ಹಿಂದಿನ ಕರ ಹಾಗೂ ಇದೀಗ ನಿಗದಿಗೊಂಡ ತೆರಿಗೆ ಮೊತ್ತವನ್ನು ಅಪ್ಡೇಟ್ ಮಾಡಬೇಕಿದೆ. ಈಗಾಗಲೇ ಕರ ಪಾವತಿಸಿರುವವರಿಗೆ ವ್ಯತ್ಯಾಸದ ಹಣ ಭರಿಸುವಂತೆ ಸೂಚಿಸಬೇಕಾಗಿದೆ. ಈ ಎಲ್ಲ ಕಾರ್ಯಗಳಿಂದಾಗಿ ಆನ್ಲೈನ್ ವ್ಯವಸ್ಥೆ ಸ್ಥಗಿತಗೊಂಡಿತ್ತು. ಗುರುವಾರ ಸಂಜೆಯಿಂದ ಆನ್ಲೈನ್ ಪ್ರಕ್ರಿಯೆ ಪುನರಾರಂಭಗೊಳ್ಳಲಿದ್ದು, ಸಾರ್ವಜನಿಕರು ಆಸ್ತಿ ತೆರಿಗೆ ಪಾವತಿಸಬಹುದು.- ಡಾ. ಸುರೇಶ ಇಟ್ನಾಳ, ಮಹಾನಗರ ಪಾಲಿಕೆ ಆಯುಕ್ತರು
ಆಸ್ತಿ ಕರ ಹೆಚ್ಚಳ ಹಿಂಪಡೆಯಲು ಒತ್ತಾಯ
ಹುಬ್ಬಳ್ಳಿ: ಆಸ್ತಿ ಕರ ಹೆಚ್ಚಿಸಿದ ಮಹಾನಗರ ಪಾಲಿಕೆಯ ಕ್ರಮವನ್ನು ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವಿರೋಧಿಸಿದೆ.
ಹೆಚ್ಚಳವನ್ನು ಕೂಡಲೇ ಹಿಂಪಡೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹಾಗೂ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿರುವ ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ದಡ ಹಾಗೂ ಇತರ ಪದಾಧಿಕಾರಿಗಳು, ಲಾಕ್ಡೌನ್ನಿಂದ ಜನಜೀವನ ಸಂಕಷ್ಟಕ್ಕೀಡಾದ ಈ ಸಮಯದಲ್ಲಿ ಆಸ್ತಿ ಕರ ಹೆಚ್ಚಿಸಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಹೆಚ್ಚಳವನ್ನು ಹಿಂಪಡೆಯುವುದಷ್ಟೇ ಅಲ್ಲ, ಹಿಂದಿನ ದರದಲ್ಲಿ ಶೇ. 5ರಷ್ಟು ರಿಯಾಯಿತಿ ನೀಡಬೇಕು. ಈ ರಿಯಾಯಿತಿಯನ್ನು ಜು. 31ರವರೆಗೆ ಮುಂದುವರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಸಂಸ್ಥೆಯಿಂದ ಪತ್ರ ಬರೆಯಲಾಗಿದೆ.
ಸಚಿವ ಜಗದೀಶ ಶೆಟ್ಟರ್ ಅವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ವಿನಯ ಜವಳಿ, ಸಿದ್ದೇಶ್ವರ ಕಮ್ಮಾರ, ಅಶೋಕ ಗಡಾದ, ಮಾಜಿ ಅಧ್ಯಕ್ಷರಾದ ಶಂಕರಣ್ಣ ಮುನವಳ್ಳಿ, ರಮೇಶ ಪಾಟೀಲ, ಸದಸ್ಯರಾದ ಬಸವರಾಜ ಯಕಲಾಸಪೂರ, ಅಂದಾನಪ್ಪ ಸಜ್ಜನರ, ಶಾಂತರಾಜ ಪೋಳ, ಇತರರು ಇದ್ದರು.
ಮುಖ್ಯಮಂತ್ರಿಗೆ ಪತ್ರ
ಧಾರವಾಡ: ಹು-ಧಾ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಳ ನಿರ್ಧಾರ ಕೈ ಬಿಡಬೇಕು ಎಂದು ಧಾರವಾಡ ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳು ಪಾಲಿಕೆ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರತಿ 3 ವರ್ಷಗಳಿಗೊಮ್ಮೆ ವಿವಿಧ ಸ್ವರೂಪದ ಆಸ್ತಿಗಳಿಗೆ ಕರ ಹೆಚ್ಚಳ ಮಾಡುವುದು ಸರ್ಕಾರದ ವಿವೇಚನೆಗೆ ಒಳಪಟ್ಟಿದೆ. ಆಸ್ತಿ ತೆರಿಗೆಯನ್ನು ಹಿಂದಿನ ಅವಧಿಗೆ ಅನ್ವಯವಾಗುವಂತೆ ಹೆಚ್ಚಿಸಲು ಕರ್ನಾಟಕ ಮಹಾನಗರ ಪಾಲಿಕೆಯ ಅಧಿನಿಯಮದಲ್ಲಿ ಯಾವುದೇ ಸ್ಪಷ್ಟ ಷರತ್ತು ಇರುವುದಿಲ್ಲ. ಕರೊನಾದಿಂದ ಎಲ್ಲರೂ ತೊಂದರೆಗೀಡಾಗಿರುವ ದಿನಗಳಲ್ಲಿ ಆಸ್ತಿ ಕರ ಪರಿಷ್ಕರಣೆಯನ್ನು 1 ವರ್ಷದ ಮಟ್ಟಿಗೆ ಮುಂದೂಡಬೇಕು ಎಂದು ಪ್ರಭು ನಡಕಟ್ಟಿ, ರವೀಂದ್ರ ಆಕಳವಾಡಿ, ಅಶೋಕ ದೊಡ್ಡಮನಿ, ಸಂದೀಪ ಪ್ರಭು, ಸುನೀಲ ಬಾಗೇವಾಡಿ, ಎಸ್.ಎಸ್. ಕುಲಕರ್ಣಿ, ಮಹೇಶ ಬೆಣ್ಣಿ, ಮಹಾಂತೇಶ ಪಟ್ಟಣಶೆಟ್ಟಿ, ಉದಯ ಯಂಡಿಗೇರಿ, ಇತರರು ಮನವಿಯಲ್ಲಿ ಆಗ್ರಹಿಸಿದ್ದಾರೆ.