ಆಸೆ-ಆಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡಿ: ಜಿಪಂ ಸಿಇಒ ಡಾ. ಪೂರ್ಣಿಮಾ

ಆಸೆ-ಆಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡಿ: ಜಿಪಂ ಸಿಇಒ ಡಾ. ಪೂರ್ಣಿಮಾ
Published on

ಹಾಸನ: ಚುನಾವಣೆಯಲ್ಲಿ ನಾವು ಮಾಡುವ ಮತದಾನವು ಶ್ರೇಷ್ಟವಾಗಿದ್ದು, ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಿ, ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಬಿ.ಆರ್ ಪೂರ್ಣಿಮಾ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರೆಕೆರೆ ಕೃಷಿ ಮಹಾವಿದ್ಯಾಲಯ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಿದ್ಯುನ್ಮಾನ ಮತ ಚಲಾವಣೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶೇಕಡ ಮತದಾನ ಪ್ರಮಾಣವನ್ನು ಹೆಚ್ಚು ಮಾಡುವಂತೆ ಚುನಾವಣಾ ಆಯೋಗದ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಡ್ಡಾಯ ಮತದಾನದ ಬಗ್ಗೆ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ ವಿವಿ ಪ್ಯಾಟ್ ಮೂಲಕ ಮತದಾನ ಮಾಡುವ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಮತದಾನ ಪಟ್ಟಿಯಲ್ಲಿ ಸೇರ್ಪಡೆಯಾಗದೆ ಇರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಗರುಡ ಆಪ್ ಮೂಲಕವೂ ಸೇರ್ಪಡೆಯಾಗಬಹುದು ಎಂದು ಮಾಹಿತಿ ನೀಡಿದರು.

ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿದ ಕೃಷಿ ಇಲಾಖೆಯ ಉಪನಿರ್ದೇಶಕ ಭಾನುಪ್ರಕಾಶ್ ಅವರು, ಜಿಲ್ಲಾ ಸ್ವಿಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಂಡಿರುವುದರಿಂದ ಶೇಕಡಾ ಮತದಾನ ಪ್ರಮಾಣ ಹೆಚ್ಚು ಮಾಡುವಲ್ಲಿ ಸಹಾಯಕವಾಗುತ್ತದೆ. ವಿವಿ ಪ್ಯಾಟ್ ಮೂಲಕ ಮತದಾನ ಮಾಡುವಾಗ ಕೆಲವರು ತಿಳಿಯದೆ ಯಾವುದೋ ಬಟನ್ ಒತ್ತುವುದರಿಂದ ಅವರ ಮತವು ಅಸಿಂಧುವಾಗುತ್ತದೆ. ಆದ್ದರಿಂದ ಮತದಾನ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿದು ಕಡ್ಡಾಯವಾಗಿ ಮತ ಚಲಾಯಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು.

ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಅಣುಕು ಮತದಾನದಲ್ಲಿ ಪಾಲ್ಗೊಂಡರು. ಮತ ಚಲಾವಣೆ ಮಾಡುವ ಬಗ್ಗೆ ಹಾಗೂ ತಾವು ಹಾಕುತ್ತಿರುವ ಮತ ಅದೇ ಅಭ್ಯರ್ಥಿಗೆ ಹೋಗುವ ಬಗ್ಗೆ ತಿಳಿದು ಸ್ವಯಂ ದೃಢೀಕರಿಸಿಕೊಂಡರು.

ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ರಾಜ ಸುಲೋಚನಾ, ಸಹಾಯಕ ಕೃಷಿ ನಿರ್ದೇಶಕ ಅಜಯ್, ಕೃಷಿ ಅಧಿಕಾರಿ ಸವಿತಾ, ಶಾಂತಿಗ್ರಾಮ ಗ್ರಾಮ ಪಂಚಾಯಿತಿ ಪಿ.ಡಿ.ಒ. ರಮೇಶ್, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net