

ಕೊಪ್ಪಳ:ರಾಜ್ಯ ವಕ್ಫ್ ಮಂಡಳಿಗೆ ಸೆ.4ರಂದು ಚುನಾವಣೆಯಿದ್ದು, ಕೊಪ್ಪಳದ ಹಿರಿಯ ವಕೀಲ ಆಸಿಫ್ ಅಲಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವಂತೆ ಕರ್ನಾಟಕ ಮುಸ್ಲಿಂ ಯೂನಿಟಿ ಜಿಲ್ಲಾಧ್ಯಕ್ಷ ಮಹಮ್ಮದ್ ಜಿಲಾನ್ ಕಿಲ್ಲೆದಾರ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮ್ ಸಮುದಾಯ ಸಂಪೂರ್ಣವಾಗಿ ಕಾಂಗ್ರೆಸ್ ಬೆಂಬಲಿಸಿದ ಕಾರಣ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ರಾಜಕೀಯದಲ್ಲಿ ಮುಸ್ಲಿಮರಿಗೆ ನ್ಯಾಯಯುತ ಪ್ರಾತಿನಿಧ್ಯ ದೊರೆಯುತ್ತಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಒಬ್ಬ ಮುಸ್ಲಿಮರಿಗೂ ಅವಕಾಶ ನೀಡಲಿಲ್ಲ. ಕೆಪಿಎಸ್ಸಿ ನೇಮಕದಲ್ಲೂ ನಮ್ಮನ್ನು ಪರಿಗಣಿಸಿಲ್ಲ. ಒಟ್ಟು 9 ಸ್ಥಾನ ನೇಮಕಾತಿ ಮಾಡಿದ್ದು, ರಾಜ್ಯದಲ್ಲಿ ಯಾವೊಬ್ಬ ಮುಸ್ಲಿಮರಿಗೆ ಅವಕಾಶ ನೀಡದಿರುವು ನಮಗೆ ನೋವು ತಂದಿದೆ. ನಮ್ಮನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡಿದ್ದು, ಅಧಿಕಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಕ್ಫ್ ಮಂಡಳಿ ರಚನೆ ಆದಾಗಿನಿಂದ ಈವರೆಗೆ ಉತ್ತರ ಕರ್ನಾಟಕ ಭಾಗದ ಯಾವೊಬ್ಬ ಮುಸ್ಲಿಮರು ಅಧ್ಯಕ್ಷರಾಗಿಲ್ಲ. ಜಿಲ್ಲೆಯ ಆಸಿಫ್ ಅಲಿ ಅವರನ್ನು ನೇಮಿಸಿ ಸಾಮಾಜಿಕ ನ್ಯಾಯ ನೀಡಬೇಕು. ಕೊಪ್ಪಳ ನಗರಸಭೆಯಲ್ಲಿ 35 ವರ್ಷಗಳ ಹಿಂದೆ ಎಸ್.ಎನ್.ಖಾದ್ರಿ ಅಧ್ಯಕ್ಷರಾಗಿದ್ದು ಬಿಟ್ಟರೆ ಈವರೆಗೆ ಇನ್ನೊಬ್ಬ ಮುಸ್ಲಿಮ್ ಅಧ್ಯಕ್ಷರಾಗಿಲ್ಲ. ಅವಕಾಶ ಇದ್ದಾಗಲೂ ಬಸವರಾಜ ಹಿಟ್ನಾಳ್, ರಾಘವೇಂದ್ರ ಹಿಟ್ನಾಳ್ ಅವಕಾಶ ಮಾಡಿಕೊಟ್ಟಿಲ್ಲ. ಈಗಲಾದರೂ ಅವಕಾಶ ಕಲ್ಪಿಸಿಕೊಡಬೇಕು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ಖಾನ್ ಸಮುದಾಯಕ್ಕೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು. ಮುಸ್ಲಿಂ ಯೂನಿಟಿ ಕೊಪ್ಪಳ ತಾಲೂಕು ಅಧ್ಯಕ್ಷ ಫಕ್ರುಸಾಬ ನದಾಫ್, ಹಜರತ್ ಅಲಿ, ಅಬ್ದುಲ್ ಅಜೀಜ್ ಮಾನ್ವಿಕರ್ ಇದ್ದರು.