

ನಾಲತವಾಡ: ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿಯವರ ಶ್ರಮದ ನಾನಾ ಯೋಜನೆಗಳ ಸುಮಾರು 736 ಆಸರೆ ಮನೆಗಳ ಜಿಪಿಎಸ್ ವಿಳಂಬ ಖಂಡಿಸಿ ಬಿಜೆಪಿ ಮುಖಂಡ ಗಂಗಾಧರ ನಾಡಗೌಡ, ಗಿರೀಶಗೌಡ ಪಾಟೀಲ, ಬಾಪುಗೌಡ ಪಾಟೀಲ ನೇತೃತ್ವದಲ್ಲಿ ಫಲಾನುಭವಿಗಳು ಸೋಮವಾರ ಪಪಂ ಮುತ್ತಿಗೆ ಹಾಕಿ ಜಿಪಿಎಸ್ ಮಾಡದಿರುವ ಕಾರಣ ಕುರಿತು ಮುಖ್ಯಾಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಪಟ್ಟಣದಲ್ಲಿ ಸಾಮಾನ್ಯ, ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತರ ಕುಟುಂಬಗಳನ್ನು ಆಸರೆ ಮನೆಗಳಿಗೆ ಆಯ್ಕೆ ಮಾಡಿ ಈಗಾಗಲೇ ಕಟ್ಟಡ ನಿರ್ಮಾಣದ ಆದೇಶಪತ್ರಗಳನ್ನು ಒದಗಿಸಲಾಗಿದೆ. 3ರಿಂದ 4 ತಿಂಗಳು ಕಳೆದರೂ ಪಪಂನವರು ಜಿಪಿಎಸ್ ಏಕೆ ಮಾಡುತ್ತಿಲ್ಲ. ಈ ಕುರಿತು ಲಿಖಿತ ಮಾಹಿತಿ ನೀಡುವಂತೆ ಒತ್ತಾಯಿಸಿದರು.
ಒಳ ನುಗ್ಗಿದ ಫಲಾನುಭವಿಗಳು: ಹಲವು ಫಲಾನುಭವಿಗಳು ಈಗಾಗಲೇ ಅರ್ಧ ಮನೆಗಳನ್ನು ನಿರ್ಮಾಣ ಮಾಡಿದ್ದೇವೆ ಎಂದು ಪುರುಷ ಮಹಿಳೆಯರು ಪಪಂ ಅಧಿಕಾರಿಗಳ ಕೊಠಡಿಗೆ ನುಗ್ಗಿ ಜಿಪಿಎಸ್ ಮಾಡುವ ಕುರಿತು ಅವಧಿ ಕೊಟ್ಟು ಲಿಖಿತ ಬರವಣಿಗೆ ನೀಡುವಂತೆ ಪಟ್ಟುಹಿಡಿದರು.
ಮುಖ್ಯಾಧಿಕಾರಿ ಅನಿಲಕುಮಾರ ಕುಲಕರ್ಣಿ ಮಾತನಾಡಿ, ಆಸರೆ ಮನೆಗಳನ್ನು ಪಡೆದ ಫಲಾನುಭವಿಗಳ ಮಾಹಿತಿ ಪಡೆದು ಒಂದು ವಾರದೊಳಗೆ ಜಿಪಿಎಸ್ ಮಾಡಲು ಸಿಬ್ಬಂದಿಗೆ ಆದೇಶಿಸುತ್ತೇನೆ.
ಸುಮಾರು 4 ತಿಂಗಳಿಂದ ಬಡ ಫಲಾನುಭವಿಗಳು ಸರ್ಕಾರದ ಅನುದಾನ ಪಡೆದು ಮನೆಗಳನ್ನು ನಿರ್ಮಿಸಿಕೊಳ್ಳಲು ಕೈಯಿಂದ ಸಾಲ ಮಾಡಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವರ ಗತಿ ಏನು, ಯಾರೋ ತಂದ ಆಸರೆ ಮನೆಗಳನ್ನು ಯಾರೋ ರಾಜಕೀಯ ಮಾಡುತ್ತಿರುವ ಎಲ್ಲ ಅಂಶಗಳನ್ನು ಗಮನಿಸುತ್ತಿದ್ದೇವೆ. ಶೀಘ್ರವೇ ಜಿಪಿಎಸ್ ಕಾರ್ಯ ಕೈಗೆತ್ತಿಕೊಳ್ಳಬೇಕು. ಮತ್ತೆ ವಿಳಂಬಗೊಂಡರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಗಂಗಾಧರ ನಾಡಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರೊಚ್ಚಿಗೆದ್ದ ಮಹಿಳೆಯರು: ಮನೆಯ ಬಿಲ್ ಬರುತ್ತದೆ ಎಂದು ಅಲ್ಲಲ್ಲಿ ಸಾಲ ಮಾಡಿ ಮನೆ ಅರ್ಧಕ್ಕೆ ಅರ್ಧ ನಿರ್ಮಿಸಿಕೊಂಡಿದ್ದೇವೆ. 4ತಿಂಗಳು ಕಳೆದರೂ ಈವರೆಗೂ ನಮಗೆ ಜಿಪಿಎಸ್ ಮಾಡಲು ಇಲ್ಲ ಸಲ್ಲದ ನೆಪ ಹೇಳುತ್ತೀರಿ. ಒಂದು ವಾರದೊಳಗೆ ಜಿಪಿಎಸ್ ಮಾಡಲಿಲ್ಲ ಎಂದರೆ ಮಹಿಳೆಯರೇ ಮತ್ತೆ ನಿಮ್ಮ ಕಚೇರಿಗೆ ನುಗ್ಗುತ್ತೇವೆ ಎಂದು ರೊಚ್ಚಿಗೆದ್ದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಮುಖಂಡರಾದ ಗಂಗಾಧರ ನಾಡಗೌಡ, ಗಿರಿಶಗೌಡ ಪಾಟೀಲ, ಬಾಪುಗೌಡ ಪಾಟೀಲ, ಎಂ.ಬಿ. ಅಂಗಡಿ, ಚನ್ನಪ್ಪಗೌಡ ಹಂಪನಗೌಡ, ಕೆ.ಆರ್. ಎತ್ತಿನಮನಿ, ಜಿ. ಮಹಾಂತೇಶ, ಅಮರೇಶ ಹಟ್ಟಿ, ಬಸಲಿಂಗಯ್ಯ ಕಪ್ಪರಮಠ, ಡಿಎಸ್‌ಎಸ್ ಮುಖಂಡರಾದ ಗುಂಡಪ್ಪ ಚಲವಾದಿ, ವೀರೇಶ ಚಲವಾದಿ, ರಮೇಶ ಮುದ್ನೂರ, ಸಂಗು ಮೇಟಿ, ಗದ್ದೆಪ್ಪ ಗೌಂಡಿ ಇತರರಿದ್ದರು.