

ಮಹಾಲಿಂಗಪುರ: ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುವಾರ ಧಿಡೀರ್ ಭೇಟಿ ನೀಡಿ ಪರಿಶೀಲಿಸಿದರು.
ವೈದ್ಯರು ಹಾಗೂ ಸಿಬ್ಬಂದಿ ಹಾಜರಿ ಪರಿಶೀಲಿಸಿದ ಅಧ್ಯಕ್ಷರು, ಅರವಳಿಕೆ ತಜ್ಞ ಡಾ. ಸಂಜಯಕುಮಾರ ತೇಲಿ ಅವರು ರಜೆ ಚೀಟಿ ನೀಡದೆ ರಜೆ ಪಡೆದಿರುವ ಕುರಿತು ವಿಚಾರಿಸಿದರು. ಮಧ್ಯಾಹ್ನ 1 ಗಂಟೆಗೆ ಆಗಮಿಸಿ ಡಾ. ತೇಲಿ ರೆಸ್ಟ್‌ಗೆ ತೆರಳಿದ್ದಾಗಿ ತಿಳಿಸಿದಾಗ ಹಾಗಿದ್ದರೆ ಹಾಜರಿ ಪುಸ್ತಕದಲ್ಲಿ ಸಹಿ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಸರ್ಕಾರಿ ಆಸ್ಪತ್ರೆಗಳು ಬಡ ರೋಗಿಗಳ ಸೇವೆಗಳಿಗಿವೆ. ಅರ್ಪಣಾ ಭಾವದಿಂದ ಕಾರ್ಯನಿರ್ವಹಿಸಬೇಕೆಂದು ಬುದ್ಧಿವಾದ ಹೇಳಿದರು.
ಮುಖ್ಯ ವೈದ್ಯಾಧಿಕಾರಿ ಡಾ.ಸಿ.ಎಂ. ವಜ್ರಮಟ್ಟಿ ಅವರ ಕರ್ತವ್ಯದ ಕುರಿತು ಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷರು, ಉಳಿದ ಸಿಬ್ಬಂದಿಯೂ ಅವರಿಗೆ ಸಾಥ್ ನೀಡಬೇಕೆಂದು ತಿಳಿಸಿದರು.
ಪುರಸಭೆ ಸದಸ್ಯ ಬಲವಂತಗೌಡ ಪಾಟೀಲ ಕಾಂಗ್ರೆಸ್ ಮುಖಂಡ ಸುನೀಲಗೌಡ ಪಾಟೀಲ ಮಾತನಾಡಿ, ಆಸ್ಪತ್ರೆ ಸಿಬ್ಬಂದಿ ಸರಿಯಾಗಿ ಆಗಮಿಸುತ್ತಿಲ್ಲ. ಸಾರ್ವಜನಿಕರೊಂದಿಗೂ ಸೌಜನ್ಯದಿಂದ ವರ್ತಿಸುತ್ತಿಲ್ಲ.ಇಲ್ಲಿ ಸರಿಯಾಗಿ ಹೆರಿಗೆಯನ್ನೂ ಮಾಡಿಸಿಕೊಳ್ಳುತ್ತಿಲ್ಲ. ಏನಾದರೂ ನೆಪ ಹೇಳಿ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತಿದ್ದಾರೆ ಎಂದು ದೂರಿದರಲ್ಲದೆ, ಗರ್ಭಿಣಿಯರ ಕುಟುಂಬದವರು ಖಾಸಗಿ ಆಸ್ಪತ್ರೆಗಳಲ್ಲಿ 50 ರಿಂದ 60 ಸಾವಿರ ಹಣ ಪಾವತಿಸಬೇಕಾಗುತ್ತದೆ. ಈ ವರ್ಗದವರು ಇಷ್ಟೊಂದು ಹಣ ಎಲ್ಲಿಂದ ತರಬೇಕು. ತಾಯಿ ಕಾರ್ಡ್ ನೀಡುವುದು ವಿಳಂಬದ ಬಗ್ಗೆ ಆಸ್ಪತ್ರೆ ವೈದ್ಯರು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಮುಖಂಡರಾದ ಪ್ರವೀಣ ಪಾಟೀಲ, ಮಹಾಲಿಂಗ ಪಾಟೀಲ, ಮಂಜು ಬಕರೆ ಇತರರಿದ್ದರು.