

ವಿರಾಜಪೇಟೆ: ಶಾಲೆಯ ಅಂತಿಮ ಹಂತದಲ್ಲಿರುವ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕುರಿತು ಅರಿಯಬೇಕು ಹಾಗೂ ಮುಂದಿನ ಆಯ್ಕೆಗೆ ಸನ್ನದ್ಧರಾಗಬೇಕು ಎಂದು ಪುತ್ತೂರು ಅಂಬಿಕಾ ಕಾಲೇಜಿನ ಉಪನ್ಯಾಸಕ ಕೆ.ವೈ. ಪ್ರದೀಪ್ ಸಲಹೆ ನೀಡಿದರು.
ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ವಿರಾಜಪೇಟೆ ವತಿಯಿಂದ ಶಾಲೆಯ ಸಭಾಂಗಣದಲ್ಲಿ ಪಾಲಕರು ಮತ್ತು ವಿದ್ಯಾರ್ಥಿಗಳಿಗಾಗಿ ಗುರುವಾರ ಏರ್ಪಡಿಸಿದ್ದ ಶಾಲಾ ಶಿಕ್ಷಣದ ನಂತರದ ಅವಕಾಶದ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಶಾಲಾ ದಿನಗಳಲ್ಲಿ ವಿಷಯಗಳನ್ನು ಅರಿತುಕೊಳ್ಳುವ ತವಕದಲ್ಲಿ ವಿದ್ಯಾರ್ಥಿಗಳು ಕೇಂದ್ರಿಕೃತವಾಗಿರುತ್ತವೆ. ಇಲ್ಲಿ ಪಾಲಕರು ಮಕ್ಕಳ ಆಸಕ್ತಿಯ ಬಗ್ಗೆ ಹೆಚ್ಚು ಗಮನಹರಿಸುವಂತಾಗಬೇಕು. ಹಲವು ವಿದ್ಯಾರ್ಥಿಗಳಿಗೆ ಶಾಲೆ ವಿದ್ಯಾಭ್ಯಾಸ ಮುಗಿದ ಬಳಿಕ ಕಾಲೇಜು ವಿಷಯಗಳ ಬಗ್ಗೆ ಗೊಂದಲ ಮೂಡುವುದು ಸಹಜ. ಪಾಲಕರ ಒತ್ತಡ, ಸಮಾಜದ ಗೌರವಕ್ಕೆ, ಕಾಲೇಜು ಆಯ್ಕೆ ಶಾಲಾ ಸ್ನೇಹಿತರು ಆಯ್ಕೆ ಮಾಡುವ ಕಾಲೇಜಿನಲ್ಲೇ ವಿದ್ಯಾಭ್ಯಾಸ ಮುಂದುವರಿಸುವ ಆಸೆ, ಹೀಗೆ ಹಲವಾರು ಸಮಸ್ಯೆಗಳು ವಿದ್ಯಾರ್ಥಿಗಳ ಕಣ್ಣ ಮುಂದೆ ಬಂದು ಸಾಗುತ್ತವೆ. ಆದರೆ ವಿದ್ಯಾರ್ಥಿಗಳು ಸ್ಥಿರ ಮನಸ್ಸನಿಂದ ಬಾಹ್ಯ ಒತ್ತಡಕ್ಕೆ ಮಣಿಯದೆ ವಿಷಯ ಆಯ್ಕೆಗೆ ಮುಂದಾಗಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಶಕ್ತರಾಗಿರಬೇಕು ಎಂದು ಸಲಹೆ ನೀಡಿದರು.
ಪ್ರಗತಿ ಶಾಲೆಯ ಆಡಳಿತಾಧಿಕಾರಿ ಮಾದಂಡ ತಿಮ್ಮಯ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಕಾರ್ಯಾಗಾರಗಳು ಎಲ್ಲ ವರ್ಷಗಳು ನಡೆಯುವಂತಾಗಬೇಕು. ವಿದ್ಯಾರ್ಥಿಗಳು ಕಲಿಕೆಗೆ ಮಾತ್ರ ಸೀಮಿತವಾಗದೆ ಭವಿಷ್ಯ ನಿರ್ಮಾಣ ಮಾಡುವ ವಿಷಯಗಳಿಗೆ ಒತ್ತು ನೀಡುವಂತಾಗಬೇಕು. ಒತ್ತಡದಿಂದ ಯಾವುದನ್ನು ಗಳಿಸುವುದು ಅಸಾಧ್ಯ. ಆದರೆ ತಿಳಿವಳಿಕೆ ಆಸಕ್ತಿ ಮತ್ತು ಕಲಿಯುವ ವಿಷಯಗಳ ಬಗ್ಗೆ ಆಳವಾದ ಅಧ್ಯಯನ ಮಾಡಿ ಕಲಿತಲ್ಲಿ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಹೇಳಿದರು.
ಪುತ್ತೂರು ಅಂಬಿಕ ಕಾಲೇಜಿನ ಪ್ರಾಂಶುಪಾಲ ಸತ್ಯಜಿತ್, ಪ್ರಗತಿ ಶಾಲೆಯ ವ್ಯವಸ್ಥಾಪಕಿ ಸುಷ್ಮಾ ತಿಮ್ಮಯ್ಯ, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಪ್ರತಿಮಾ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು, ಸಿಬ್ಬಂದಿ ಹಾಜರಿದ್ದರು.