

ಚಾಮರಾಜನಗರ: ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದಲ್ಲಿ ಆಷಾಢ ಶುಕ್ರವಾರದ ಅಂಗವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪೂಜಾಕೈಂಕರ್ಯ ನೆರವೇರಿಸಿದರು.
ನಗರದ ಇತಿಹಾಸ ಪ್ರಸಿದ್ಧ ಶ್ರೀಚಾಮರಾಜೇಶ್ವರಸ್ವಾಮಿ ದೇವಾಲಯದಲ್ಲಿ ಜು.10 ರಂದು ಬಹಳ ವಿಜೃಂಭಣೆಯಿಂದ ರಥೋತ್ಸವ ನಡೆದಿತ್ತು. ಈ ನಿಟ್ಟಿನಲ್ಲಿ ಹಾಗೂ ಆಷಾಢಮಾಸದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದ ಮಹಿಳೆಯರು ನಿಂಬೆಹಣ್ಣಿನ ಆರತಿಯನ್ನು ಬೆಳಗಿ ಇಷ್ಠಾರ್ಥ ಸಿದ್ಧಿ ಹಾಗೂ ಕಂಕಣ ಭಾಗ್ಯ ನೆರವೇರಿಸುವಂತೆ ಪ್ರಾರ್ಥನೆ ಸಲ್ಲಿಸಿದರು. ಸರದಿಯಲ್ಲಿ ನಿಂತು ಶ್ರೀಚಾಮುಂಡೇಶ್ವರಿ ತಾಯಿಯ ಆಶೀರ್ವಾದವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಅರ್ಚಕ ನಾಗರಾಜ್ ದಿಕ್ಷೀತ್ ಅವರು ಮಾತನಾಡಿ, ಆಷಾಢ ಶುಕ್ರವಾರ ಶ್ರೀಚಾಮುಂಡೇಶ್ವರಿ ದೇವಿಯ ರಕ್ಷಣೆಯನ್ನು ಪಡೆದರೇ ಲಕ್ಷ್ಮೀಯ ಅನುಗ್ರಹ ದೊರೆಯಲಿದೆ. ನಿಂಬೆಹಣ್ಣು ಆರತಿ ಮಾಡುವುದರಿಂದ ದೃಷ್ಟಿ ಪರಿಹಾರ ಸೇರಿದಂತೆ ಇಷ್ಟಾರ್ಥಗಳು ಸಿದ್ಧಿಯಾಗಲಿದೆ. ರಾಹುಕಾಲದಲ್ಲಿ ದೇವಿಯ ದರ್ಶನವನ್ನು ಪಡೆದುಕೊಂಡರೆ, ಶತ್ರು ಭಾದೆ ಪರಿಹಾರವಾಗಲಿದೆ. ಈ ಕಾರಣದಿಂದ ಆಷಾಢಮಾಸದ ಶುಕ್ರವಾರದಂದು ಶ್ರೀಚಾಮುಂಡೇಶ್ವರಿ ದೇವಿಯನ್ನು ವಿಶೇಷ ರೀತಿಯಲ್ಲಿ ಅಲಂಕಾರ ಮಾಡಲಾಗುತ್ತದೆ. ಪ್ರತಿವಾರವೂ ಒಂದೊಂದು ಬಗೆಯ ಅಲಂಕಾರ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೆಲಕಾಲ ನೂಕುನುಗ್ಗಲು:
ಆಷಾಢ ಶುಕ್ರವಾರ ಶ್ರೀಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲು ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭೇಟಿ ನೀಡಿದ್ದರಿಂದ ಕೆಲಕಾಲ ನೂಕುನುಗ್ಗಲು ಉಂಟಾಯಿತು. ದೇವಸ್ಥಾನದ ಮುಂಭಾಗ ಧೂಪ-ದೀಪ ಹಾಗೂ ಇನ್ನಿತರೆ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚಾಗಿತ್ತು. ದೇವಾಲಯದ ಒಳ ಭಾಗದಲ್ಲಿ ನಿಂಬೆಹಣ್ಣು ಆರತಿ ಸಿದ್ದಪಡಿಸಲು ಹಾಗೂ ದೇವರ ದರ್ಶನಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರಿಂದ ಕೆಲಕಾಲ ನೂಕುನುಗ್ಗಲು ಉಂಟಾಯಿತು. ಬಳಿಕ ಜನಸಂಖ್ಯೆ ಕಡಿಮೆಯಾಗುತ್ತಾ ಹೋಯಿತು. ರಥೋತ್ಸವದ ಹಿನ್ನೆಲೆಯಲ್ಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಶುಕ್ರವಾರ ಪೂಜೆ ನೆರವೇರಿಸಿದರು. ದೇವಾಲಯದ ಸುತ್ತಲೂ ವಾಹನಗಳನ್ನು ಅಡ್ಡದಿಡ್ಡಿ ನಿಲ್ಲಿಸಿದ್ದರಿಂದ, ಸಾರ್ವಜನಿಕರಿಗೆ ಕಿರಿಕಿರಿ ಉಂಟಾಯಿತು.
ಮುಂದುವರಿದ ವ್ಯಾಪಾರ ಭರಾಟೆ:
ಶ್ರೀಚಾಮರಾಜೇಶ್ವರಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ಹಾಕಿದ್ದ ಆಟಿಕೆಗಳು, ಅಲಂಕಾರಿಕ ವಸ್ತುಗಳು, ಗೃಹ ಉಪಯೋಗಿ ವಸ್ತುಗಳು, ಸಿಹಿ ತಿನಿಸುಗಳು ಹಾಗೂ ಇನ್ನಿತರೆ ಅಂಗಡಿ ಮುಂಗಟ್ಟುಗಳನ್ನು ಶುಕ್ರವಾರವೂ ವ್ಯಾಪಾರದ ಭರಾಟೆ ಮುಂದುವರಿಯಿತು. ಶ್ರೀಚಾಮರಾಜೇಶ್ವರಸ್ವಾಮಿ ದೇವಾಲಯದ ಉದ್ಯಾನವದ ಎರಡು ಇಕ್ಕೆಲಗಳಲ್ಲಿ ಹಾಗೂ ಮಧ್ಯೆದ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡುಬಂದರು. ಕಾಲೇಜು ವಿದ್ಯಾರ್ಥಿಗಳು ಗುಂಪು-ಗುಂಪಾಗಿ ಆಗಮಿಸುವ ದೃಶ್ಯಗಳು ಸಾಮಾನ್ಯವಾಗಿತ್ತು.