

ಮಂಡ್ಯ: ಕಡೇ ಆಷಾಢ ಶುಕ್ರವಾರದ ಅಂಗವಾಗಿ ಜಿಲ್ಲಾದ್ಯಂತ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಗರದ ಕಾಳಿಕಾಂಬ, ಚಾಮುಂಡೇಶ್ವರಿ, ಹುಚ್ಚಮ್ಮ ಸೇರಿದಂತೆ ವಿವಿಧ ಶಕ್ತಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅನ್ನದಾಸೋಹ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ಅಧಿದೇವತೆ ಕಾಳಿಕಾಂಬ ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿವಿಧ ಪೂಜಾ ಕಾರ್ಯಗಳನ್ನು ನಡೆಸಲಾಯಿತು.
ಚಾಮುಂಡೇಶ್ವರಿನಗರ ಬಡಾವಣೆಯಲ್ಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸುಭಾಷ್‌ನಗರ ಬಡಾವಣೆಯಲ್ಲಿರುವ ಹುಚ್ಚಮ್ಮ ದೇವಾಲಯದಲ್ಲಿ ಕಡೇ ಆಷಾಢ ಶುಕ್ರವಾರದ ಅಂಗವಾಗಿ ವಿಶೇಷ ಪೂಜೆ ನಡೆಯಿತು. ದೇವರು ಮತ್ತು ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಗುರುವಾರದಿಂದಲೇ ದೇವಳದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಶುಕ್ರವಾರ ಬೆಳಗ್ಗಿನಿಂದಲೇ ಗಣಪತಿ ಹೋಮ, ನಿಂಬೆಹಣ್ಣಿನ ಆರತಿ, ಪಂಚಾಮೃತಾದಿ ಅಭಿಷೇಕ, ದೇವಿಗೆ ಮಹಾಮಂಗಳಾರತಿ ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ನಗರದ ನೂರಡಿ ರಸ್ತೆಯಲ್ಲಿರುವ ಬಿಸಿಲು ಮಾರಮ್ಮನ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಬಳಿಕ ಭಕ್ತರಿಗೆ ದಾಸೋಹ ಏರ್ಪಡಿಸಲಾಗಿತ್ತು. ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಚಿಕ್ಕೇಗೌಡನದೊಡ್ಡಿಯಲ್ಲಿರುವ ಚಾಮುಂಡೇಶ್ವರಿ ದೇವಾಲಯ, ಕಲ್ಲಹಳ್ಳಿಯ ಆಂಜನೇಯಸ್ವಾಮಿ ದೇವಾಲಯ ಸಂಕೀರ್ಣದಲ್ಲಿರುವ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಅಂತೆಯೇ ಜಿಲ್ಲೆಯ ವಿವಿಧ ಶಕ್ತಿ ದೇವಾಲಯಗಳಲ್ಲೂ ಕಡೇ ಆಷಾಢ ಶುಕ್ರವಾರದ ಅಂಗವಾಗಿ ಪೂಜೆ, ಹೋಮ, ಹವನಗಳು, ಅಭಿಷೇಕಗಳು ಸಾಂಗವಾಗಿ ನೆರವೇರಿದವು.
ತಾಲೂಕಿನ ಹೊಳಲು ಗ್ರಾಮದಲ್ಲಿ ಪಟ್ಟಲದಮ್ಮ ದೇವಿ, ಚಿತ್ತನಾಳಮ್ಮ ದೇವಸ್ಥಾನದಲ್ಲಿ ದೇವರಿಗೆ ವಿಶೇಷವಾಗಿ ಹೂವಿನ ಅಲಂಕಾರ, ಅಭಿಷೇಕ, ಕುಂಕುಮಾರ್ಚನೆ ನೆರವೇರಿಸಿ ಪೂಜೆ ಮಾಡಲಾಯಿತು. ಶಿವನಂದಿ ಕಾಂಡಿಮೆಂಟ್ಸ್ ವತಿಯಿಂದ ದೇವಸ್ಥಾನದ ಆವರಣದಲ್ಲಿ ವಿಶೇಷವಾಗಿ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಚಾಮುಂಡೇಶ್ವರಿ ಜನ್ಮದಿನದ ಅಂಗವಾಗಿ ಬಂದ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಮಕ್ಕಳು ಮಹಿಳೆಯರು ದೇವರಿಗೆ ವಿಶೇಷವಾಗಿ ಪೂಜೆ ನೆರವೇರಿಸಿ ಆರತಿ ಬೆಳಗಿಸಿ ಹರಕೆ ತೀರಿಸಿದರು.
ದೇವಸ್ಥಾನದ ಪದಾಧಿಕಾರಿಗಳಾದ ಮಾಜಿ ಶಾಸಕರಾದ ಎಚ್.ಬಿ.ರಾಮು, ವಿಜಯ್‌ಕುಮಾರ್, ರಾಮಕೃಷ್ಣ, ಅರುಣ್‌ಕುಮಾರ್, ಕೆ.ಪಿ.ಕುಮಾರ್, ನಂದೀಶ್, ಪಟೇಲ್ ರಾಮು, ಸಂತೋಷ್, ಕೆಇಬಿ ತಿಲಕ್, ಮನು, ನವೀನಗೌಡ, ಶಂಕರ್, ಪ್ರಧಾನ ಅರ್ಚಕರಾದ ಕೃಷ್ಣಕಾಂತ್, ನರಸಿಂಹಮೂರ್ತಿ, ಶಿವನಂದಿ ಕಾಂಡಿಮೆಂಟ್ಸ್ ಮಾಲೀಕರಾದ ದಿವ್ಯಾ, ಕುಮಾರ್ ಇತರರಿದ್ದರು.