

ಕಲಬುರಗಿ: ಆಷಾಢ ಮಾಸ ಪರ್ವಗಳ ಹೆಬ್ಬಾಗಿಲು. ಆಷಾಢದಿಂದ ಕಾರ್ತೀಕ ಮಾಸದವರೆಗೆ ಅನೇಕ ಪರ್ವಗಳು ಜರುಗಲಿವೆ ಎಂದು ಕಾಶಿ ಜಗದ್ಗುರು ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.
ನಗರದ ಗುರುಶಾಂತ ಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು, ಆಷಾಢದಲ್ಲಿ ಬರುವ ಏಕಾದಶಿ ವಾರಕರಿ ಸಂಪ್ರದಾಯ ಮತ್ತು ಗುರುಪೌರ್ಣಿಮೆ ಸಮಸ್ತ ಹಿಂದುಗಳಿಗೆ ಪರ್ವಕಾಲ. ನಂತರದ ಶ್ರಾವಣ ಮಾಸ ಶಿವನ ಆರಾಧನೆ, ಭಾದ್ರಪದ ಮಾಸ ಗಣೇಶನ ಆರಾಧನೆ, ಆಶ್ವೀಜ ಮಾಸ ದೇವಿ ಆರಾಧನೆ ಹಾಗೂ ಕಾರ್ತೀಕ ಮಾಸ ದೀಪೋತ್ಸವಕ್ಕಾಗಿ ಪ್ರಸಿದ್ಧವಾಗಿದೆ ಎಂದರು.
ಸಕಲ ಸಂಪ್ರದಾಯದ ಜಗದ್ಗುರುಗಳು ಹಾಗೂ ಸಾಧು-ಸಂತರು ಈ ಚಾತುರ್ಮಾಸ್ಯದಲ್ಲಿ ಲೋಕ ಕಲ್ಯಾಣಾರ್ಥ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಾರೆ. ಕಲಬುರಗಿಯ ಸೊಗಸನಗೇರಿಯ ಕಡಗಂಚಿ ಮಠದಲ್ಲೂ ಆಷಾಢ ಮಾಸದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಸಿದ್ಧಾಂತ ಸಿಖಾಮಣಿಯ ಆಧ್ಯಾತ್ಮಿಕ ಆಶೀರ್ವಚನ ಏರ್ಪಡಿಸಿದ್ದು, ಸರ್ವರೂ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾಶಿ ಜಗದ್ಗುರುಗಳ ಪ್ರವಚನ ಕಾರ್ಯಕ್ರಮದ ಧರ್ಮ ಸಭೆಯನ್ನು ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿ ಪೂಜ್ಯ ಚಿ.ದೊಡ್ಡಪ್ಪ ಅಪ್ಪ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಕಡಗಂಚಿಯ ಶ್ರೀ ವೀರಭದ್ರ ಶಿವಾರ್ಚಾಯರು ನೇತೃತ್ವ ವಹಿಸಿದ್ದರು.
ಡಾ.ಅಲ್ಲಮಪ್ರಭು ದೇಶಮುಖ, ಚಂದನಕೇರಾ, ಸುಲೇಪೇಟ, ಕಡಗಂಚಿ ಪಾಳಾದ ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯರು ಸಿದ್ದೇಶ್ವರ ಶಾಸ್ತ್ರೀ, ಮಲ್ಲಿಕಾರ್ಜುನ ಶಾಸ್ತ್ರೀ, ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆ ಅಧ್ಯಕ್ಷ ಅಮೃತಪ್ಪ ಮಲ್ಕಪಗೌಡ, ಪಂಚಪೀಠದ ವಾರ್ತಾಧಿಕಾರಿ ಸಿದ್ರಾಮಪ್ಪ ಆಲಗೂಡಕರ್, ಪತ್ರಕರ್ತ ಚಂದ್ರಕಾಂತ ಹಾವನೂರ, ಮಲ್ಲಣ್ಣ ಕಣ್ಣಿ, ಶಿವಾನಂದ ಮಠಪತಿ ಇತರರಿದ್ದರು.
ಗರೂರಿನ ಶಿವಲಿಂಗಯ್ಯ ಶಾಸ್ತ್ರೀ, ಗುರುಲಿಂಗಯ್ಯ ಹಿತ್ತಲಶಿರೂರು, ಮಹಾಂತಯ್ಯ ಸ್ವಾಮಿ ನಿಂಗದಳ್ಳಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಯುವ ಸಾಹಿತಿ ಶಿವಯ್ಯ ಸ್ವಾಮಿ ಮಠಪತಿ ನಿರೂಪಣೆ ಮಾಡಿದರು.