

ಶ್ರೀರಂಗಪಟ್ಟಣ: ತಾಲೂಕಿನ ವಿವಿಧ ದೇಗುಲಗಳಲ್ಲಿ 2ನೇ ಆಷಾಢ ಶುಕ್ರವಾರ ಪ್ರಯುಕ್ತ ವಿಶೇಷ ಪೂಜೆ ಕೈಂಕರ್ಯಗಳನ್ನು ದೇವರಿಗೆ ಸಲ್ಲಿಸಲಾಯಿತು.
ತಾಲೂಕಿನ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟಿ.ಎಂ.ಹೊಸೂರು ಗೇಟ್ ಬಳಿ ಇರುವ ಪ್ರಸಿದ್ಧ ಮಹಾಕಾಳಿ ದೇಗುಲಕ್ಕೆ ಶುಕ್ರವಾರ ಮುಂಜಾನೆಯಿಂದಲೂ ಭಕ್ತರು ತಂಡೋಪ ತಂಡವಾಗಿ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಶ್ರೀ ಮಹಾಕಾಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ದೇಗುಲದ ಅರ್ಚಕರು ಮುಂಜಾನೆ 4.30ರ ಬ್ರಾಹ್ಮಿ ಮುಹೂರ್ತದಲ್ಲಿ ದೇವಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ ವಿವಿಧ ಬಗೆಯ ವಿಶೇಷ ಹೂಗಳು ಹಾಗೂ ವಸ್ತ್ರಗಳಿಂದ ದೇವಿಯನ್ನು ಅಲಂಕರಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು. ದೇವರ ದರ್ಶನ ಭಕ್ತರಿಗೆ ದೇಗುಲದಲ್ಲಿ ಅನ್ನ ಪ್ರಸಾದವನ್ನು ವಿತರಿಸಲಾಯಿತು.
ಪಟ್ಟಣದ ಶ್ರೀ ಚಾಮುಂಡೇಶ್ವರಿ ಬೀದಿಯ ದೇವಿಯ ದೇವಾಲಯದಲ್ಲಿ ಅಧಿ ದೇವತೆಗೆ ವೈದ್ದಿಕ ಲಕ್ಷ್ಮೀಶ ಶರ್ಮ ನೇತೃತ್ವದಲ್ಲಿ ಅರಿಶಿಣ, ಕುಂಕಮ ಹಾಗೂ ಸುಗಂಧ ದ್ರವ್ಯಗಳು ಸೇರಿದಂತೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ವಿಶೇಷವಾಗಿ ದೇವಿಯ ಗರ್ಭಗುಡಿ ಸೇರಿದಂತೆ ಪ್ರಾಂಗಣವನ್ನು ನೂರಾರು ತೆಂಗಿನಕಾಯಿಗಳಿಂದ ಅಲಂಕರಿಸಿದ್ದು, ಭಕ್ತರ ಕಣ್ಮನ ಸೆಳೆಯಿತು. ಶ್ರೀರಂಗಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ದರ್ಶನ ಪಡೆದರು.