ಆಶ್ರಯ ಶಾಲೆ ಶಿಕ್ಷಕರಿಗೆ ಸಿಗದ ಸಂಬಳ

Published on

ಚಾಮರಾಜನಗರ: ಜಿಲ್ಲೆಯಲ್ಲಿರುವ ಪರಿಶಿಷ್ಟ ವರ್ಗದ ವಾಲ್ಮೀಕಿ ಆಶ್ರಮ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಹೊರ ಸಂಪನ್ಮೂಲ ನೌಕರರಾಗಿರುವ ಶಿಕ್ಷಕರಿಗೆ ಹಲವು ತಿಂಗಳಿಂದ ಸಕಾಲಕ್ಕೆ ವೇತನ ದೊರೆತಿಲ್ಲ.

ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿ ಆಶ್ರಮ ಶಾಲೆಗಳಲ್ಲಿ 1ರಿಂದ 6ನೇ ತರಗತಿವರೆಗೆ ವ್ಯಾಸಂಗ ಮಾಡಲು ಅವಕಾಶವಿದೆ. ಚಾಮರಾಜನಗರ ತಾಲೂಕಿನಲ್ಲಿ 6, ಯಳಂದೂರು ತಾಲೂಕಿನಲ್ಲಿ 1, ಗುಂಡ್ಲುಪೇಟೆ ತಾಲೂಕಿನಲ್ಲಿ 3, ಹನೂರು ತಾಲೂಕಿನಲ್ಲಿ 8, ಕೊಳ್ಳೇಗಾಲ ತಾಲೂಕಿನಲ್ಲಿ 2 ಸೇರಿ ಒಟ್ಟು 20 ಆಶ್ರಮ ಶಾಲೆಗಳಿವೆ. 1562 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ 100 ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಆದರೆ ಒಬ್ಬ ಕಾಯಂ ಶಿಕ್ಷಕನಿಲ್ಲ. 23 ದಿನಗೂಲಿ ಶಿಕ್ಷಕರು, 59 ಹೊರ ಸಂಪನ್ಮೂಲ ನೌಕರ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಇವರಲ್ಲಿ ಈ ಹೊರ ಸಂಪನ್ಮೂಲ ನೌಕರರಿಗೆ 10,500 ರೂ. ಕನಿಷ್ಟ ವೇತನವಿದೆ. ಆದರೆ ಇದೂ ಕೂಡ ಕಳೆದ ಹಲವು ತಿಂಗಳಿಂದ ಕೈಗೆ ಬಂದಿಲ್ಲ.

ಎಂಒಡಿ ಹಣ ಬಂದಿಲ್ಲ: 2023ರಿಂದ ಶಾಲಾ ಅವಧಿಯ ನಂತರ ತೆಗೆದುಕೊಳ್ಳುವ ತರಗತಿ ಮತ್ತು ಶೈಕ್ಷಣಿಕವಾಗಿ ಪೂಕರವಾದ ಚಟುವಟಿಕೆಗಳನ್ನು ನಡೆಸಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಆದೇಶ ಮಾಡಲಾಗಿತ್ತು. ಇದಕ್ಕಾಗಿ ಶಿಕ್ಷಕರಿಗೆ ತಿಂಗಳಿಗೆ 6000 ರೂ. ನೀಡಲಾಗುತ್ತದೆ. ಸಕಾಲಕ್ಕೆ ವೇತನ ದೊರೆಯದ ಶಿಕ್ಷಕರಿಗೆ ಈ ಹಣವೂ ಬಂದಿಲ್ಲ.

ೆ.19ರಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಿರುವ ಶಿಕ್ಷಕರು, 2023-24ನೇ ಸಾಲಿನ ನವೆಂಬರ್‌ನಿಂದ ಇಲ್ಲಿವರೆಗೂ ಕೊಳ್ಳೇಗಾಲ ಮತ್ತು ಹನೂರು ತಾಲೂಕಿನ ಶಿಕ್ಷಕರಿಗೆ ಹೆಚ್ಚುವರಿ ತರಗತಿ ಅಂದರೆ ಎಂಒಡಿ ವೇತನವನ್ನು ನೀಡಿಲ್ಲ. ಕೂಡಲೇ ಇದನ್ನು ಪರಿಶೀಲಿಸಿ ವೇತನ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.

ಭವಿಷ್ಯ ರೂಪಿಸುವವರ ಭವಿಷ್ಯ ಮಂಕು: ಜಿಲ್ಲೆಯಲ್ಲಿರುವ ಆಶ್ರಮ ಶಾಲೆಗಳು ಸಮಾಜದ ಕಟ್ಟಕಡೆಯ ಸಮುದಾಯಗಳಿಗೆ ಶಿಕ್ಷಣ ಕೊಡುವ ಮಹತ್ವದ ಪಾತ್ರವಹಿಸಿವೆ. ಚಾಮರಾಜನಗರ ತಾಲೂಕಿನ ಕೆ.ಗುಡಿ, ಮುರಟಿಪಾಳ್ಯ, ರಂಗಸಂದ್ರ, ಕೋಳಿಪಾಳ್ಯ, ಪುಣಜನೂರು, ಬೇಡಗುಳಿ ಆಶ್ರಮ ಶಾಲೆಗಳಲ್ಲಿ ಒಟ್ಟು 447 ವಿದ್ಯಾರ್ಥಿಗಳು, ಯಳಂದೂರು ತಾಲೂಕಿನ ಪುರಾಣಿಪೋಡು ಆಶ್ರಮ ಶಾಲೆಯಲ್ಲಿ ಒಟ್ಟು 37 ವಿದ್ಯಾರ್ಥಿಗಳು, ಗುಂಡ್ಲುಪೇಟೆ ತಾಲೂಕಿನ ಬಂಡೀಪುರ, ಮದ್ದೂರು, ಬರಗಿ ಆಶ್ರಮ ಶಾಲೆಗಳಲ್ಲಿ ಒಟ್ಟು 170 ವಿದ್ಯಾರ್ಥಿಗಳು, ಹನೂರು ತಾಲೂಕಿನ ಗಾಣಿಗಮಂಗಲ, ಮಲೆ ಮಹದೇಶ್ವರ ಬೆಟ್ಟ, ಪೊನ್ನಾಚಿ, ಕೋಣನಕೆರೆ, ಹಿರಿಯಾಂಬಲ, ಜೀರಿಗೆಗದ್ದೆ, ಬೈಲೂರು, ನೆಕ್ಕುಂದಿ ಆಶ್ರಮ ಶಾಲೆಗಳಲ್ಲಿ ಒಟ್ಟು 840 ವಿದ್ಯಾರ್ಥಿಗಳು, ಕೊಳ್ಳೇಗಾಲ ತಾಲೂಕಿನ ಕಂಚಳ್ಳಿ, ರಾಜಪ್ಪಾಜಿ ನಗರ ಗ್ರಾಮಗಳಲ್ಲಿ ಆಶ್ರಮ ಶಾಲೆಗಳಲ್ಲಿ ಒಟ್ಟು 68 ಸೇರಿ 1562 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಕರೂ ಸಹ ನಗರ, ಪಟ್ಟಣ ಪ್ರದೇಶಗಳಿಗಿಂತಲೂ ಭಿನ್ನವಾದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸಕಾಲಕ್ಕೆ ಸಂಬಳ ದೊರೆಯದೆ ಭವಿಷ್ಯ ಕಟ್ಟುವ ಶಿಕ್ಷಕರ ಭವಿಷ್ಯವೇ ಅತಂತ್ರವಾಗಿದೆ.

ಆಶ್ರಮ ಶಾಲೆಗಳಲ್ಲಿ ತಿಂಗಳಿಗೆ ಸರಿಯಾಗಿ ಶಿಕ್ಷಕರಿಗೆ ಸಂಬಳ ನೀಡುತ್ತಿಲ್ಲ. ಇದನ್ನೇ ಮಾಡಲಾಗದ ಅಧಿಕಾರಿಗಳಿಂದ ಅಭಿವೃದ್ಧಿಯ ನಿರೀಕ್ಷೆ ಮಾಡಲು ಅಸಾಧ್ಯ. ಶಿಕ್ಷಕರ ಸಮಸ್ಯೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಪ್ರತಿ ತಿಂಗಳು ಸಂಬಳ ನೀಡಬೇಕು. ನಾಗೇಂದ್ರ ಗಾಣಿಗಮಂಗಲ, ಆದಿವಾಸಿ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಹನೂರು 2023ರ ಡಿಸೆಂಬರ್‌ನಿಂದಲೂ ಶಿಕ್ಷಕರಿಗೆ ಎಂಒಡಿ ಪಾವತಿಯಾಗಿರಲಿಲ್ಲ. ಇಲಾಖೆಯ ಕಾರ್ಯದರ್ಶಿಗಳು ಮತ್ತು ನಿರ್ದೇಶಕ ಗಮನಕ್ಕೆ ತಂದು ಸತತ ಪ್ರಯತ್ನ ಮಾಡಿ 42 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ನಮ್ಮ ಇಲಾಖೆಯಲ್ಲೇ ಇದ್ದ ಜಿಲ್ಲಾ ಪಂಚಾಯಿತಿಯ 33 ಲಕ್ಷ ರೂ. ಅನುದಾನವನ್ನು ಮರು ಹೊಂದಾಣಿಕೆಗೆ ಕೋರಿ ಪತ್ರ ಬರೆದಿದ್ದೇವೆ. ಅದೂ ಕೂಡ ಶೀಘ್ರದಲ್ಲೇ ಬಿಡುಗೆಯಾಗಲಿದೆ. ಶಿಕ್ಷಕರ ಅಕೌಂಟ್‌ಗೆ ಹಣ ಕ್ರೆಡಿಟ್ ಮಾಡಿಸಲು ಕ್ರಮವಹಿಸಿದ್ದೇವೆ. ಪ್ರತಿ ವರ್ಷ ನಾಲ್ಕು ತಿಂಗಳ ಸಂಬಳದ ಕೊರತೆಯಾಗುತ್ತಿತ್ತು. ಮೇಲಧಿಕಾರಿಗಳ ಗಮನಕ್ಕೆ ತಂದಾಗ ಅನುದಾನ ಕೊಟ್ಟಿದ್ದಾರೆ. 20 ಲಕ್ಷ ರೂ. ಕೊರತೆ ಇದ್ದು, ಇದನ್ನೂ ಸಹ ಕೊಡುವುದಾಗಿ ತಿಳಿಸಿದ್ದಾರೆ. ಅನುದಾನ ನೀಡಿರುವ ಹಿರಿಯ ಅಧಿಕಾರಿಗಳಿಗೆ ಶಿಕ್ಷಕರ ಪರವಾಗಿ ಧನ್ಯವಾದ ತಿಳಿಸುತ್ತೇನೆ. ಬಿಂದ್ಯಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net