ಆಶ್ರಯ ಯೋಜನೆಯಲ್ಲಿ 158 ಮನೆ ನಿರ್ಮಾಣ

nrp house
ಎನ್.ಆರ್.ಪುರದ ಹಿಳುವಳ್ಳಿ ಗ್ರಾಮದಲ್ಲಿ ಆಶ್ರಯ ಬಡಾವಣೆ ನಿರ್ಮಾಣಕ್ಕೆ ಶಾಸಕ ಟಿ.ಡಿ.ರಾಜೇಗೌಡ ಶಂಕುಸ್ಥಾಪನೆ ನೆರವೇರಿಸಿದರು. ಎಂ.ಶ್ರೀನಿವಾಸ್, ಕೆ.ಪಿ.ಅಂಶುಮಂತ್, ಜುಬೇದಾ, ಉಮಾ ಇತರರಿದ್ದರು.
Published on

ಎನ್.ಆರ್.ಪುರ: ಆಶ್ರಯ ಯೋಜನೆಯಡಿ ಪಟ್ಟಣ ಪಂಚಾಯಿತಿಯಿಂದ ಫಲಾನುಭವಿಗಳು ಆಯ್ಕೆಯಾಗಿದ್ದು, ಅವರಿಗೆ ಬಡಾವಣೆ ನಿರ್ಮಿಸಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಹಕ್ಕುಪತ್ರ ನೀಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಹಿಳುವಳ್ಳಿ ಗ್ರಾಮದ 5 ಎಕರೆ ಜಮೀನಿನಲ್ಲಿ 3.71 ಕೋಟಿ ರೂ. ವೆಚ್ಚದ ಆಶ್ರಯ ಬಡಾವಣೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಬಡವಾಣೆ ನಿರ್ಮಾಣಕ್ಕೆ ಈ ಹಿಂದೆಯೇ ಟೆಂಡರ್ ಆಗಿತ್ತು. ಕಾಮಗಾರಿ ಕೈಗೊಳ್ಳುವುದು ವಿಳಂಬವಾಗಿದ್ದರಿಂದ ವೆಚ್ಚ ಹೆಚ್ಚಾಗಿದ್ದರಿಂದ ಸರ್ಕಾರದಿಂದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ರಸ್ತೆ, ಚರಂಡಿ, ಕುಡಿಯುವ ನೀರಿನ ಟ್ಯಾಂಕ್, ವಿದ್ಯುತ್ ದೀಪ ಅಳವಡಿಕೆಯಂತ ಮೂಲ ಸೌಲಭ್ಯಗಳನ್ನು ಬಡಾವಣೆಗೆ ಕಲ್ಪಿಸಲಾಗುವುದು. ಫಲಾನುಭವಿಗಳಿಗೆ ಚೀಟಿ ಎತ್ತುವ ಮೂಲಕ ನಿವೇಶನ ಹಂಚಲಾಗಿದೆ. ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಪೌರಕಾರ್ಮಿಕರು, ಎಸ್ಸಿ, ಎಸ್ಟಿ. ಅಂಗವಿಕಲರು, ವಿಧವೆ, ವಿಧುರರು, ಹಿರಿಯ ನಾಗರಿಕರು ಹಾಗೂ ಸಾಮಾನ್ಯ ವರ್ಗದ ನಿವೇಶನ ರಹಿತರಿಗೆ ಆದ್ಯತೆ ನೀಡಲಾಗಿದೆ ಎಂದರು.

ಡಿ.ಬಿ.ಚಂದ್ರೇಗೌಡ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ರಾಜೀವ್ ನಗರ ಬಡಾವಣೆಯಲ್ಲಿ 103 ನಿವೇಶನಗಳನ್ನು ನೀಡಲಾಗಿತ್ತು. ಅದನ್ನು ಬಿಟ್ಟರೆ ಪ್ರಸ್ತುತ 158 ಜನರಿಗೆ ನಿವೇಶನ ಹಂಚಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಆಶ್ರಯ ಬಡಾವಣೆಗೆ 3.71 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿರುವುದು ದಾಖಲೆ. ಹಿಳುವಳ್ಳಿ ಗ್ರಾಮದ ಗ್ರಾಮಠಾಣಾ ಪ್ರದೇಶದ 5 ಎಕರೆ ಜಮೀನಿನಲ್ಲಿ 158 ಫಲಾನುಭವಿಗಳಿಗೆ ನಿವೇಶನ ನೀಡಲು ಶಾಸಕರ ಕಳೆದ ಅವಧಿಯಲ್ಲಿ ಆಶ್ರಯ ಸಮಿತಿಯಲ್ಲಿ ಆಯ್ಕೆ ಮಾಡಿ ಈ ಬಡಾವಣೆಗೆ ಇಂದಿರಾಗಾಂಧಿ ಬಡಾವಣೆ ಎಂದು ನಾಮಕರಣ ಮಾಡಲಾಗಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲಿ ವಸತಿ ಸಚಿವರಾಗಿದ್ದ ವಿ.ಸೋಮಣ್ಣ ಅವರು ಬಡಾವಣೆ ನಿರ್ಮಾಣಕ್ಕೆ 3.31 ಕೋಟಿ ರೂ. ಅನುದಾನ ನೀಡಿದ್ದರು. ಟೆಂಡರ್ ಕರೆಯಲು ವಿಳಂಬವಾಗಿದ್ದರಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಾಸಕರು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಅವರ ಸಹಕಾರದಿಂದ ವಸತಿ ಸಚಿವ ಜಮೀರ್ ಅಹಮ್ಮದ್ ಅವರ ಮೂಲಕ 50 ಲಕ್ಷ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಿ ಬಡಾವಣೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಚುನಾವಣೆಯಲ್ಲಿ ಜನರಿಗೆ ಕೊಟ್ಟ ಭರವಸೆ ಈಡೇರಿಸಿದ ಆತ್ಮತೃಪ್ತಿಯಿದೆ. ಬಡಾವಣೆಗೆ ಅನುದಾನ ತರುವಲ್ಲಿ ವೈಯಕ್ತಿಕವಾಗಿ ಸಾಕಷ್ಟು ಶ್ರಮಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದಿರುವ ನಿವೇಶನ ರಹಿತರಿಗೆ ನಿವೇಶನ ನೀಡಲು ಶ್ರಮಿಸುವುದಾಗಿ ತಿಳಿಸಿದರು.

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಶ್ರೀನಿವಾಸ್ ಮಾತನಾಡಿ, 158 ನಿವೇಶನರಹಿತರಿಗೆ ಸೂರು ಕೊಡುವುದು ಪುಣ್ಯದ ಕೆಲಸ. ಬಡಾವಣೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸುವಲ್ಲಿ ಪ್ರಶಾಂತ್ ಅವರ ಶ್ರಮ ಸಾಕಷ್ಟಿದೆ ಎಂದರು.

ಪಪಂ ಅಧ್ಯಕ್ಷೆ ಜುಬೇದಾ ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿ ಮನೆ ಇಲ್ಲದವರನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೊಸದಾಗಿ ನಿವೇಶನ ಗುರುತಿಸಿ ಮನೆಯಿಲ್ಲದವರಿಗೆ ಮನೆ ನೀಡಲಾಗುವುದು ಎಂದರು.

ಭದ್ರಾ-ಕಾಡಾ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿದರು. ಪಪಂ ಉಪಾಧ್ಯಕ್ಷೆ ಉಮಾ ಕೇಶವ್, ಸದಸ್ಯರಾದ ಆರ್.ಕುಮಾರಸ್ವಾಮಿ, ಮುನಾವರಪಾಷ, ಸೈಯದ್ ವಸೀಂ, ಮುಕುಂದ, ರಜಿ, ಸುಬ್ರಹ್ಮಣ್ಯ, ಆಶ್ರಯ ಸಮಿತಿ ಸದಸ್ಯರಾದ ಸಮಿತ್ರಾ, ಸುರೇಶ್ ಶೆಟ್ಟಿ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net