ಆಶ್ರಯ ಮನೆಗೆ ಆಗ್ರಹಿಸಿ ಪ್ರತಿಭಟನೆ

21
Published on

ಮೈಸೂರು: ಹಿಂದಿನ ಕರಾರುಪತ್ರದ ಪ್ರಕಾರ ಆಶ್ರಯ ಮನೆಗಳನ್ನು ಸ್ವಾಧೀನಕ್ಕೆ ನೀಡಬೇಕು ಎಂದು ಆಗ್ರಹಿಸಿ ಫಲಾನುಭವಿಗಳು ನಗರದ ಚಾಮುಂಡಿಪುರಂ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ರಾಜೀವ್‌ಗಾಂಧಿ ವಸತಿ ಯೋಜನೆಯಡಿ 2005ನೇ ಸಾಲಿನಲ್ಲಿ ಕೃಷ್ಣರಾಜ ಕ್ಷೇತ್ರದ ಆಶ್ರಯ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಷರತ್ತು ಪೂರ್ಣಗೊಳಿಸಿ ದಾಖಲೆ ನೀಡಿ ಕಾನೂನುಬದ್ಧವಾಗಿ ಕರಾರು ಪತ್ರವನ್ನು ಪಡೆದುಕೊಂಡಿದ್ದು, ಇದನ್ನು ನೋಂದಣಾಧಿಕಾರಿ ಕಚೇರಿಯಲ್ಲಿ ಸಹ ನೋಂದಣಿ ಮಾಡಿಸಲಾಗಿದೆ. ಆದರೆ, ಈವರೆಗೂ ಅಧಿಕೃತ ಫಲಾನುಭವಿಗಳಿಗೆ ನಿವೇಶನ, ಆಶ್ರಯ ಮನೆ ನೀಡಿಲ್ಲ ಎಂದು ಆರೋಪಿಸಿದರು.

ಕೆ.ಆರ್. ಕ್ಷೇತ್ರದ ಆಶ್ರಯ ಸಮಿತಿಯ ಹಿಂದಿನ ಸಭಾ ನಡವಳಿಗೆ ಮಾನ್ಯತೆ ನೀಡಿಲ್ಲ. ಬದಲಿಗೆ ಪದೇ ಪದೆ ನಡವಳಿಯನ್ನು ಬದಲಾವಣೆ ಮಾಡಿ ಫಲಾನುಭವಿಗಳಿಗೆ ಉದ್ದೇಶಪೂರ್ವಕವಾಗಿ ತೊಂದರೆ ನೀಡಲಾಗುತ್ತಿದೆ. ಮನೆ, ನಿವೇಶನಕ್ಕಾಗಿ ಫಲಾನುಭವಿಗಳು ಕಾಯುತ್ತಿದ್ದಾರೆ. ಆದರೆ, ಈವರೆಗೂ ಸೌಲಭ್ಯ ನೀಡುತ್ತಿಲ್ಲ. ಈ ಮೂಲಕ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಆಶ್ರಯ ಮನೆ ಪಡೆಯಲು ಕಟ್ಟಿರುವ ಹಣಕ್ಕೆ ಬಡ್ಡಿ ಕಟ್ಟಿಬೇಕಾಗಿದೆ. ಜತೆಗೆ, ನಾವು ವಾಸವಿರುವ ಮನೆಗಳಿಗೆ ಬಾಡಿಕೆ ಕಟ್ಟಬೇಕಾಗಿದೆ. ಇದರಿಂದ ಆರ್ಥಿಕ ತೊಂದರೆಗೆ ಸಿಲುಕಿಕೊಂಡಿದ್ದು, ಕರಾರು ಪತ್ರದ ಪ್ರಕಾರ ಆಶ್ರಯ ಮನೆ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತ, ರಾಜೀವ್‌ಗಾಂಧಿ ವಸತಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಪಾಲಿಕೆ ಸದಸ್ಯ ಜಿ.ಗೋಪಿ, ಪಾಲಿಕೆ ಮಾಜಿ ಸದಸ್ಯರಾದ ವಿ.ಮಂಜುನಾಥ್, ಎಂ.ಸಿ.ಚಿಕ್ಕಣ್ಣ, ಸುನಿಲ್, ಶಾಂತ ವೀರೇಂದ್ರಸ್ವಾಮಿ, ಮುಖಂಡರಾದ ಮಂಜು ಬಂಡಿಕೇರಿ, ರವಿಕುಮಾರ್, ರಾಘವೇಂದ್ರ, ಅಶ್ವಿನಿ, ಟೈಲರ್ ರಮೇಶ್, ಶ್ರೀಕಂಠು ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net