ಆಶ್ರಯ ಮನೆಗಳಿಗಿನ್ನು ಫಲಾನುಭವಿಗಳೇ ಮಾಲೀಕರು!

h23-ashraya
Published on

ಸಂತೋಷ ವೈದ್ಯ ಹುಬ್ಬಳ್ಳಿ

ಕಳೆದ ಸುಮಾರು 2 ದಶಕಗಳಿಂದ ಅವಳಿನಗರದ ಆಶ್ರಯ ಬಡಾವಣೆಗಳಲ್ಲಿ ವಾಸಿಸುತ್ತಿರುವ ಮೂಲ ಫಲಾನುಭವಿಗಳು ಶೀಘ್ರದಲ್ಲೇ ತಮ್ಮ ಮನೆಯ ಅಧಿಕೃತ ಮಾಲೀಕರಾಗಲಿದ್ದಾರೆ. ಆಶ್ರಯ ಮನೆಗಳನ್ನು ಮೂಲ ಫಲಾನುಭವಿಗಳ ಹೆಸರಿಗೆ ನೋಂದಣಿ ಮಾಡಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ.

ಫಲಾನುಭವಿಗಳಿಗೆ ಆಶ್ರಯ ಮನೆ ಹಂಚಿಕೆಯಾದಾಗಿನಿಂದ ಇಲ್ಲಿಯವರೆಗೆ ಪಾಲಿಕೆ ಆಯುಕ್ತರೇ ಮಾಲೀಕರಾಗಿದ್ದಾರೆ. ಸಾಲದ ಮೇಲೆ ಮನೆ ಹಂಚಿಕೆ ಮಾಡಿರುವುದೇ ಇದಕ್ಕೆ ಕಾರಣ. ಅವಳಿ ನಗರದಲ್ಲಿ 17 ಆಶ್ರಯ ಬಡಾವಣೆಗಳಿದ್ದು, 7165 ಮನೆಗಳಿವೆ. ಎಲ್ಲ ಮನೆಗಳಲ್ಲಿ ವಾಸ್ತವ್ಯವಿದೆ. ಇದರಲ್ಲಿ 5 ಸಾವಿರ ಮನೆಗಳಲ್ಲಿ ಮೂಲ ಫಲಾನುಭವಿಗಳು ವಾಸಿಸುತ್ತಿದ್ದಾರೆಂದು ಪಾಲಿಕೆ ಗುರುತಿಸಿದೆ.

ಮೊದಲ ದಂತದಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 1470 ಫಲಾನುಭವಿಗಳ ಹೆಸರಿಗೆ ಮನೆ ನೋಂದಣಿ ಮಾಡಿಸಲು ಪಾಲಿಕೆ ಮುಂದಾಗಿದೆ. ಈ ಸಂಬಂಧ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹಾಗೂ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರು ಹುಬ್ಬಳ್ಳಿ ಉತ್ತರ ಮತ್ತು ದಕ್ಷಿಣ ಹಿರಿಯ ಉಪ ನೋಂದಣಾಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. ಉಳಿದ ಮೂಲ ಫಲಾನುಭವಿಗಳ ದಾಖಲೆಗಳ ಪರಿಶೀಲನೆ ಕಾರ್ಯ ನಡೆದಿದೆ. ಹು-ಧಾ ಅವಳಿ ನಗರದಲ್ಲಿ ಮೊದಲ ಬಾರಿ 2002-03ರಲ್ಲಿ ಆಶ್ರಯ ಮನೆಗಳನ್ನು ಬಿಪಿಎಲ್ ಕುಟುಂಬಗಳಿಗೆ ಹಂಚಿಕೆ ಮಾಡಲಾಗಿತ್ತು. ಫಲಾನುಭವಿಗಳ ವಂತಿಗೆ 5 ಸಾವಿರ ರೂ ಹಾಗೂ ಸಾಲದ ಮೊತ್ತ 20 ಸಾವಿರ ರೂ. ಇತ್ತು. ಸಾಲದ ಮೊತ್ತವನ್ನು ಮಾಸಿಕ ಕಂತುಗಳಲ್ಲಿ 5 ವರ್ಷಗಳಲ್ಲಿ ಪಾವತಿಸಬೇಕಿತ್ತು. ಆದರೆ, ಬಹಳಷ್ಟು ಫಲಾನುಭವಿಗಳಿಗೆ ತುಂಬಲು ಸಾಧ್ಯವಾಗಿರಲಿಲ್ಲ. ‘ಎಲ್ಲ ಮೂಲ ಫಲಾನುಭವಿಗಳಿಗೆ ಮೊದಲ ಆದ್ಯತೆ ಮೇರೆಗೆ ಆಶ್ರಯ ಮನೆ ನೋಂದಣಿ ಮಾಡಿಸಿಕೊಡಬೇಕು. ಬಳಿಕ ಅನಧಿಕೃತವಾಗಿ ವಾಸಿಸುತ್ತಿರುವ ಫಲಾನುಭವಿಗಳಲ್ಲಿ ತೀರಾ ಅಗತ್ಯವುಳ್ಳವರಿಗೆ ಮನೆ ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಜಗದೀಶನಗರ ಆಶ್ರಯ ನಿವಾಸಿಗಳ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಪ್ರೇಮನಾಥ ಚಿಕ್ಕತುಂಬಳ ಆಗ್ರಹಿಸಿದ್ದಾರೆ.

ಹು-ಧಾ ಪಶ್ಚಿಮ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಸುಮಾರು 1470 ಆಶ್ರಯ ಫಲಾನುಭವಿಗಳ ಹೆಸರಿಗೆ ಮನೆ ನೋಂದಣಿ ಮಾಡಿಸಲಾಗುವುದು. ಫಲಾನುಭವಿಗಳು ಉಪ ನೋಂದಣಾಧಿಕಾರಿ ಕಚೇರಿಗೆ ಹೋಗುವ ಅವಶ್ಯಕತೆ ಬಾರದ ಹಾಗೆ ನೇರವಾಗಿ ನೋಂದಣಿ ಮಾಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದೇವೆ. | ಅರವಿಂದ ಬೆಲ್ಲದ ಶಾಸಕ

ಅನುಕೂಲಗಳು ಹಲವು: ಫಲಾನುಭವಿಗಳ ಹೆಸರಿಗೆ ಮನೆ ನೋಂದಣಿಯಾದರೆ ಹಲವು ಅನುಕೂಲಗಳಿವೆ. ಫಲಾನುಭವಿಗಳೇ ಮಾಲೀಕರಾಗುವುದರಿಂದ ಮನೆಯನ್ನು ಬೇರೆಯವರಿಗೆ ಮಾರಬಹುದು. ಬಾಡಿಗೆ ಆಧಾರದಲ್ಲಿ ಯಾರಿಗಾದರೂ ಕೊಡಬಹುದು. ಮಕ್ಕಳ ಹೆಸರಿಗೆ ವರ್ಗಾಯಿಸಬಹುದು. ಬ್ಯಾಂಕಿನಿಂದ ಸಾಲ ಪಡೆದು ಮನೆ ನವೀಕರಣ ಮಾಡಿಕೊಳ್ಳಬಹುದಾಗಿದೆ. ಇದಕ್ಕೆಲ್ಲ ಇಲ್ಲಿಯವರೆಗೆ ಅವಕಾಶವಿರಲಿಲ್ಲ.

ಆಶ್ರಯ ಫಲಾನುಭವಿಗಳ ಹೆಸರಿಗೆ ಮನೆ ನೋಂದಣಿ ಮಾಡಿಸಿಕೊಡುವ ಸಂಬಂಧ ಸ್ಥಳೀಯ ಹಿರಿಯ ಉಪ ನೋಂದಣಾಧಿಕಾರಿಗಳ ಜತೆ ಸಭೆ ನಡೆಸಿ ನೋಂದಣಿ ಮಹಾ ಪರಿವೀಕ್ಷಕರಿಗೆ ಪತ್ರ ಬರೆದು ಅಭಿಪ್ರಾಯ ಕೋರಲಾಗಿದೆ. ಕ್ರಯಪತ್ರಕ್ಕೆ (ಸೇಲ್ ಡೀಡ್) ಬರುವ ವೆಚ್ಚವನ್ನು ಪಾಲಿಕೆಯಿಂದ ಭರಿಸುವ ವಿಷಯ ಚರ್ಚೆಯ ಹಂತದಲ್ಲಿದೆ. | ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತ

201415ರಲ್ಲಿಯೇ ಆಗಬೇಕಿತ್ತು: 2012ರಲ್ಲಿ ಬಿಜೆಪಿ ಸರ್ಕಾರ ಆಶ್ರಯ ಮನೆಗಳ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ್ದರೆ, 2014ರಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಸಾಲ ಮನ್ನಾ ಮಾಡಿತ್ತು. ಅಂದರೆ, 2014-15 ರಲ್ಲಿಯೇ ಆಶ್ರಯ ಫಲಾನುಭವಿಗಳಿಗೆ ಋಣ ಮುಕ್ತ ನೋಂದಣಿ ಪತ್ರದೊಂದಿಗೆ ಆಶ್ರಯ ಮನೆಗಳನ್ನು ನೋಂದಣಿ ಮಾಡಿಸಿಕೊಡಬೇಕಿತ್ತು. ಆದರೆ, 2015ರಲ್ಲಿ ಮೂಲ ಫಲಾನುಭವಿಗಳ ಸಮೀಕ್ಷೆಗೆ ಕೈ ಹಾಕಿದ ಪಾಲಿಕೆ ಈಗಲೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಆದರೂ, ಮೂಲ ಫಲಾನುಭವಿಗಳ ಹೆಸರಿಗೆ ಈಗ ಮನೆ ನೋಂದಣಿ ಮಾಡಿಸಿಕೊಡುವ ಪ್ರಕ್ರಿಯೆಗೆ ಮುಂದಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net