ಆಶ್ರಮ ಶಾಲೆ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ

59
Published on

ಮೈಸೂರು:ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಎಚ್.ಡಿ.ಕೋಟೆ ತಾಲೂಕಿನ ಬಸವನಗಿರಿ ಆಶ್ರಮಶಾಲೆ, ಮೇಟಿಕುಪ್ಪೆ ಆಶ್ರಮ ಶಾಲೆಯ ವಿದ್ಯಾರ್ಥಿಗಳಿಗೆ ಗುರುವಾರ ಆರೋಗ್ಯ ತಪಾಸಣೆ ನಡೆಸಲಾಯಿತು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಉಪನಿರ್ದೇಶಕಿ ಬಿ.ಎಸ್.ಪ್ರಭಾ ಅರಸ್ ಮಾತನಾಡಿ, ನಮ್ಮ ಸಂಸ್ಥೆಯಿಂದ ಇದು 3ನೇ ಕ್ಯಾಂಪ್ ಆಗಿದ್ದು, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ವಾಕ್ ಮತ್ತು ಶ್ರವಣ ಸಂಸ್ಥೆಯ ಸಹಯೋಗದಲ್ಲಿ ಆಶ್ರಮ ಶಾಲೆಗಳಲ್ಲಿ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿಸುತ್ತಿದ್ದೇವೆ. ಮೂರು ಆರೋಗ್ಯ ಶಿಬಿರಗಳಿಂದ ಇದುವರೆಗೆ 520 ಮಕ್ಕಳಿಗೆ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದರು.
ತಪಾಸಣೆಯಲ್ಲಿ ಕಿವಿ, ಮೂಗು, ಗಂಟಲು, ಶ್ರವಣ ಪರೀಕ್ಷೆ, ವಾಕ್‌ಪರೀಕ್ಷೆ, ಕಣ್ಣು, ದಂತಚಿಕಿತ್ಸೆ, ರಕ್ತಪರೀಕ್ಷೆ ಮಾಡಲಾಗುತ್ತಿದೆ. 30 ಮಕ್ಕಳಿಗೆ ಹೆಚ್ಚಿನ ದಂತ ಚಿಕಿತ್ಸೆಗೆ ಡೆಂಟಲ್ ಕಾಲೇಜಿಗೆ ಕಳುಹಿಸಲಾಗುವುದು. 55 ಮಕ್ಕಳಿಗೆ ಹುಳುಕಲ್ಲು ಬರದ ಹಾಗೆ ಚಿಕಿತ್ಸೆ ನೀಡಲಾಗಿದೆ. ಆಶ್ರಮಶಾಲೆಯ ಹೆಚ್ಚಿನ ಮಕ್ಕಳಿಗೆ ರಕ್ತಹೀನತೆ ಇದ್ದು ಸರ್ಕಾರ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೀಡುವ ಕ್ಷೀರಭಾಗ್ಯ ಯೋಜನೆಯನ್ನು ಆಶ್ರಮಶಾಲೆಯ ವಿದ್ಯಾರ್ಥಿಗಳಿಗೆ ವಿಸ್ತರಿಸಿದರೆ ಮಕ್ಕಳಲ್ಲಿರುವ ರಕ್ತಹೀನತೆಯನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.
ವಿವಿಧ ಸಾರ್ವಜನಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ರವೀಶ್‌ಗಣಿ, ಜೆಎಸ್‌ಎಸ್ ಆಸ್ಪತ್ರೆಯ ಮಕ್ಕಳ ದಂತ ತಜ್ಞ ಡಾ. ಎಂ.ಡಿ. ಇಂದಿರಾ, ಡಾ. ಮಹಾದೇವಪ್ಪ, ಡಾ. ಅರುಣ್, ಡಾ. ಪ್ರಶಾಂತ್, ಡಾ. ಚೇತಕ್, ಡಾ. ಎಚ್.ಪಿ. ಜ್ಯೋತಿ, ಸಂಸ್ಥೆಯ ತಾಲೂಕು ಕಲ್ಯಾಣಾಧಿಕಾರಿ ಹನುಮಂತರಾಯಪ್ಪ, ಮುಖ್ಯಶಿಕ್ಷಕ ಬಿ.ಕೆ. ನಂಜಯ್ಯ, ಕಚೇರಿ ಅಧೀಕ್ಷಕ ನಾಗರಾಜ್, ಆಶ್ರಮಶಾಲೆಯ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net