ಆಶಾಢ ಶಕ್ತಿದೇವತೆಗಳ ದೇಗುಲಗಳಲ್ಲಿ ಆರಾಧನೆ

Barageramma Devi
Published on

ಚಿತ್ರದುರ್ಗ: ಕೋಟೆನಗರಿಯ ಶಕ್ತಿದೇವತೆಗಳ ದೇಗುಲಗಳಲ್ಲಿ ಆಶಾಢ ಮಾಸದ ಎರಡನೇ ಮಂಗಳವಾರ ದೇವಿ ಮಂತ್ರ ಪಠಣ, ಸಹಸ್ರ ನಾಮಾವಳಿ, ಅಭಿಷೇಕದೊಂದಿಗೆ ವಿಶೇಷ ಪೂಜೆ ನೆರವೇರಿದವು.

ಆಶಾಢದಲ್ಲೂ ದೇವಿಯನ್ನು ಆರಾಧಿಸುವ ಭಕ್ತರ ಸಂಖ್ಯೆ ಹೆಚ್ಚು. ಹೀಗಾಗಿ ದೇವತೆಗಳ ಮೂರ್ತಿ ಅತ್ಯಂತ ಸುಂದರವಾಗಿ ಕಾಣುವಂತೆ ಹಲವು ದೇಗುಲಗಳಲ್ಲಿ ಪುಷ್ಪಾಲಂಕಾರ ಸೇವೆ ನಡೆದವು. ಆದರೆ, ಮಳೆಯಿಂದಾಗಿ ಭಕ್ತರ ಸಂಖ್ಯೆ ಕ್ಷೀಣಿಸಿತು.

ದುರ್ಗದ ಅಧಿದೇವತೆ ಏಕನಾಥೇಶ್ವರಿ, ರಾಜಮಾತೆ ಉಚ್ಚಂಗಿಯಲ್ಲಮ್ಮ, ನಗರದೇವತೆ ಬರಗೇರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಕಣಿವೆಮಾರಮ್ಮ, ಬನ್ನಿ ಮಹಾಕಾಳಿಕಾಂಬ, ಚೌಡೇಶ್ವರಿ, ಕುಕ್ಕವಾಡೇಶ್ವರಿ, ಅಂತರಘಟ್ಟಮ್ಮ, ಕೊಲ್ಲಾಪುರದ ಮಹಾಲಕ್ಷ್ಮೀ, ಅನ್ನಪೂಣೇಶ್ವರಿ, ಚಾಮುಂಡೇಶ್ವರಿ, ಮಾಸ್ತಮ್ಮ, ಮೈಲಮ್ಮ, ಮಲೆನಾಡು ಚೌಡೇಶ್ವರಿ, ದುರ್ಗಾಮಾತೆ, ದ್ಯಾಮಲಾಂಬ ಸೇರಿ ವಿವಿಧ ದೇಗುಲಗಳಲ್ಲಿ ಶ್ರದ್ಧಾ-ಭಕ್ತಿಯಿಂದ ಪೂಜೆ ಜರುಗಿದವು.

ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿಗೆ ಹಳದಿ, ನೇರಳೆ, ಬಿಳಿ, ನೀಲಿ ವರ್ಣದ ಸೇವಂತಿ, ಬಟನ್ಸ್, ಕನಕಾಂಬರ, ಮಲ್ಲಿಗೆ, ಕಾಕಡಾ ಸೇರಿ ಇನ್ನಿತರೆ ಪುಷ್ಪಗಳಿಂದ ವಿಶೇಷಾಲಂಕಾರ ಸೇವೆ ಜರುಗಿತು.

ವಿವಿಧ ದೇವಿ ದೇಗುಲಗಳಲ್ಲಿ ಬೆಳಗ್ಗೆ 11.30ರ ಮೊದಲ ಮಹಾಮಂಗಳಾರತಿ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ರಾತ್ರಿ 9ರವರೆಗೂ ಭಕ್ತರು ಭೇಟಿ ನೀಡಿದರು. ಹೂ, ಹಣ್ಣು, ಕಾಯಿ, ಅರಿಶಿಣ, ಕುಂಕುಮ ಸಮೇತ ಮಡಿಲಕ್ಕಿ ಸಮರ್ಪಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net