

ಮಾಲೂರು: ವೈದ್ಯರು, ನರ್ಸ್, ಆಯುಷ್ ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳವನ್ನು ಮುಖ್ಯಮಂತ್ರಿಗಳು ಶೀಘ್ರ ಘೋಷಣೆ ಮಾಡಲಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಪಟ್ಟಣದ ಜೆಎಸ್‌ಎಸ್ ಕಾಲೇಜು ಆವರಣದಲ್ಲಿ ಬುಧವಾರ ಕೋಚಿಮುಲ್, ಎಂಪಿಸಿಎಸ್‌ನಿಂದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನದ ಚೆಕ್ ವಿತರಿಸಿ ಮಾತನಾಡಿ, ಯಾರಿಗೆ ಎಷ್ಟು ವೇತನ ಹೆಚ್ಚಿಸಬೇಕೆಂದು ತೀರ್ಮಾನಿಸುವ ಅಧಿಕಾರವನ್ನು ಸಿಎಂಗೆ ನೀಡಲಾಗಿದೆ. ಶೀಘ್ರ ತೀರ್ಮಾನ ಹೊರಬೀಳಲಿದೆ ಎಂದರು.
ಆ.25ರಂದು ಸಭೆ: ಡಿಸಿಸಿ ಬ್ಯಾಂಕ್ ಮೂಲಕ ಆಶಾ ಕಾರ್ಯಕರ್ತೆಯರಿಗೆ ಸಾಲ ನೀಡುವ ಸಂಬಂಧ ಆ. 25ರಂದು ವಿಧಾನಸೌಧದಲ್ಲಿ ರಾಜ್ಯದ 21 ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್, ಸಹಕಾರ ಇಲಾಖೆ ಜಂಟಿ ನಿಬಂಧಕರ ಸಭೆ ಕರೆಯಲಾಗಿದ್ದು, ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ರಾಜಕೀಯ ಕಾರಣದ ಒತ್ತಡದಿಂದ ಎಂವಿಕೆ ಮೆಗಾ ಡೇರಿಗೆ ತಡೆ ನೀಡಿದಾಗ ನಂಜೇಗೌಡರು ಅವಾಜ್ ಹಾಕಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ಜತೆ ಚರ್ಚಿಸಿದ್ದೇವೆ. ಕೋಲಾರ, ಚಿಕ್ಕಬಳ್ಳಾಪುರದೊಂದಿಗೆ ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳಲ್ಲೂ ಒಕ್ಕೂಟ ವಿಭಜನೆಯ ಪ್ರಸ್ತಾವನೆಯಿದೆ. ಕೋಚಿಮುಲ್ ವಿಭಜನೆಗೆ ನನ್ನ ವಿರೋಧವಿಲ್ಲ. ಅಭಿವೃದ್ಧಿಗೆ ಅನುಕೂಲ ಆಗುವುದಾದರೆ ಮುಂದುವರಿಯಿರಿ, ಇಲ್ಲವೇ ಒಟ್ಟಿಗೇ ನಡೆಸಿಕೊಂಡು ಹೋಗಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮಾತನಾಡಿ, ಆಶಾ ಕಾರ್ಯಕರ್ತೆಯರು ಜನರ ಜೀವ ಉಳಿಸಲು ದೇವತೆಗಳಂತೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇನ್ನಷ್ಟು ಸವಲತ್ತು ಕಲ್ಪಿಸಲು ಸರ್ಕಾರ ಚಿಂತಿಸಿದೆ ಎಂದರು. ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಕೋಲಾರ ಎಪಿಎಂಸಿಗೆ ಜಾಗದ ಸಮಸ್ಯೆ ಬಗೆಹರಿಸಿಕೊಡುವಂತೆ ಸಹಕಾರ ಸಚಿವರಲ್ಲಿ ಕೋರಿದರು.
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಸಹಕಾರ ಸಚಿವರ ಸೂಚನೆ ಮೇರೆಗೆ ಕೋಚಿಮುಲ್ ಎರಡು ಜಿಲ್ಲೆಯ 2008 ಆಶಾ ಕಾರ್ಯಕರ್ತೆಯರಿಗೆ ತಲಾ 3000 ರೂ.ನಂತೆ 60.26 ಲಕ್ಷ ರೂ. ವಿತರಿಸುತ್ತಿದೆ. ಆಶಾ ಕಾರ್ಯಕರ್ತೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕೆಂದು ಸಚಿವರನ್ನು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಕೋಚಿಮುಲ್ ನಿರ್ದೇಶಕರಾದ ಕೆ.ಎನ್.ನಾಗರಾಜ್, ವೈ.ಬಿ.ಅಶ್ವತ್ಥನಾರಾಯಣ್, ಎನ್.ಹನುಮೇಶ್, ಆರ್.ಶ್ರೀನಿವಾಸ್, ಕಾಂತಮ್ಮ ಅಂಜನಿ ಸೋಮಣ್ಣ, ಸುನಂದಮ್ಮ, ಡಿಸಿಸಿ ಬ್ಯಾಂಕ್ ನಿರ್ದೇಶಕ ಚನ್ನರಾಯಪ್ಪ, ಕೊಚೀಮುಲ್ ವ್ಯವಸ್ಥಾಪಕ ಡಾ.ಎಚ್.ವಿ.ತಿಪ್ಪಾರೆಡ್ಡಿ, ಉಪನಿಬಂಧಕ ಸಿದ್ದನಗೌಡ ನೀಲಪ್ಪನವರ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ರವಿ, ತಹಸೀಲ್ದಾರ್ ಮಂಜುನಾಥ್, ತಾ.ಪಂ. ಇ.ಒ ಕೃಷ್ಣಪ್ಪ, ಉಪ ವ್ಯವಸ್ಥಾಪಕ ಡಾ.ಚೇತನ್, ಆರೋಗ್ಯಾಧಿಕಾರಿ ಡಾ.ಪ್ರಸನ್ನ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ತಾಲೂಕು ಅಧ್ಯಕ್ಷ ಪುರನಾರಾಯಣಸ್ವಾಮಿ, ಎಟ್ಟಕೋಡಿ ಕೃಷ್ಣಾರೆಡ್ಡಿ ಇತರರು ಹಾಜರಿದ್ದರು.
ಆಪರೇಷನ್ ಕಮಲದ ಗುಟ್ಟು ರಟ್ಟು: ಮೈತ್ರಿ ಸರ್ಕಾರ ಪತನದ ನಂತರ ಆಪರೇಷನ್ ಕಮಲದಲ್ಲಿ ಶಾಸಕ ಕೆ.ವೈ.ನಂಜೇಗೌಡರಿಗೆ ಗಾಳ ಹಾಕಿದ್ದನ್ನು ಸಚಿವ ಎಸ್.ಟಿ.ಸೋಮಶೇಖರ್ ಬಹಿರಂಗಪಡಿಸಿದರೆ, ಸಚಿವರು ಹೇಳಿದ್ದು ನಿಜ, ಆದರೆ ನನಗೆ ಆ ಧೈರ್ಯ ಇರಲಿಲ್ಲ ಎಂದು ಶಾಸಕ ನಂಜೇಗೌಡ ಪ್ರತಿಕ್ರಿಯಿಸಿದರು. ನಂಜೇಗೌಡರು ನಮ್ಮ ಜತೆಗಿದ್ದವರು. ಜತೆಗೆ ಬಂದಿದ್ದರೆ ಮಂತ್ರಿಯಾಗುತ್ತಿದ್ದರು. ಇನ್ನೂ ಕಾಲ ಮಿಂಚಿಲ್ಲ, ನನ್ನ ಜತೆ ಇರಿ, ಮುಂದಕ್ಕೆ ನಾನು, ಉಸ್ತುವಾರಿ ಸಚಿವರು, ಸಂಸದರು ಕೈ ಜೋಡಿಸುತ್ತೇವೆ ಎಂದರು. ಪ್ರತಿಕ್ರಿಯಿಸಿದ ನಂಜೇಗೌಡ, ನಾನು ಸೋಮಶೇಖರ್ ಟೀಂನಲ್ಲಿದ್ದೆ. ಈ ಟೀಂ ಹಾಕಿದ ಗೆರೆಯನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ದಾಟುತ್ತಿರಲಿಲ್ಲ. ಸಚಿವರು ಹೇಳಿದ್ದು ನಿಜ, ಅವರೇನೋ ಧೈರ್ಯದಿಂದ ರಾಜೀನಾಮೆ ನೀಡಿ ಅವರ ಸರ್ಕಾರ ಸ್ಥಾಪಿಸಿ ಮರುಚುನಾವಣೆಯಲ್ಲಿ ಗೆದ್ದು ಮಂತ್ರಿಯಾದರು. ನನಗೆ ಆ ಧೈರ್ಯ ಇರಲಿಲ್ಲ ಎಂದರು.
ಸುಧಾಕರ್ ಸಚಿವರಾಗುವ ಮುನ್ನವೇ ಕೋಚಿಮುಲ್ ವಿಭಜನೆಗೆ ಆಡಳಿತ ಮಂಡಳಿ ಒಪ್ಪಿಗೆ ನೀಡಿತ್ತು. ಮೆಗಾ ಡೇರಿ ಟೆಂಡರ್‌ಗೆ ತಡೆ ನೀಡಿದ ವೇಳೆ ತೆರವಿಗೆ ಮನವಿ ಮಾಡಿದ್ದೇನೆಯೇ ವಿನಾ ಅವಾಜ್ ಹಾಕಿಲ್ಲ. ನೀವೇ ಮುಂದೆ ನಿಂತು ಕ್ಲಿಯರ್ ಮಾಡಿಸಿ, ನಿಮ್ಮ ಅವಧಿಯಲ್ಲೇ ಸಿಎಂ ಕೈಯಿಂದ ಲೋಕಾರ್ಪಣೆ ಮಾಡಿಸಿ. ಕೆ.ವೈ.ನಂಜೇಗೌಡ, ಶಾಸಕ