ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಸುರಕ್ಷತಾ ಕಿಟ್ ನೀಡದಿರುವುದಕ್ಕೆ ಆಕ್ರೋಶ, ಇಂಡ್ಲವಾಡಿ ಪಿಎಚ್‌ಸಿ ಎದುರು ಧರಣಿ

28ank news and photos 04
Published on

ಆನೇಕಲ್: ಪ್ರತಿದಿನವೂ ಸೋಂಕಿತರ ಮನೆಗೆ ಹೋಗಿ, ಮಾಹಿತಿ ಪಡೆದು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದೇವೆ. ಆದರೂ ನಮಗೆ ಸುರಕ್ಷತಾ ಕಿಟ್ ಕೊಡುತ್ತಿಲ್ಲ ಎಂದು ಆರೋಪಿಸಿ ಆಶಾ ಕಾರ್ಯಕರ್ತೆಯರು ಆನೇಕಲ್‌ನ ಇಂಡ್ಲವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ವಾರದಿಂದ ನಿರಂತರವಾಗಿ ನಾವು ಆಸ್ಪತ್ರೆ ಬಳಿ ಬಂದು ಮಾಸ್ಕ್, ಸ್ಯಾನಿಟೈಸರ್ ಕೊಡುವಂತೆ ಕೇಳುತ್ತಿದ್ದೇವೆ. ಆದರೆ, ಯಾವುದನ್ನೂ ಕೊಡುತ್ತಿಲ್ಲ. ನಮಗೂ ಕುಟುಂಬ ಇದೆ. ಮಕ್ಕಳು ಇದ್ದಾರೆ. ನಮಗೆ ಸುರಕ್ಷತೆ ಇಲ್ಲದ ಕಾರಣ ನಮ್ಮ ಕುಟುಂಬಸ್ಥರೂ ಸೋಂಕಿನ ಅಪಾಯಕ್ಕೆ ಸಿಲುಕಿಕೊಳ್ಳುವ ಆತಂಕ ಕಾಡುತ್ತಿದೆ ಎಂದು ಅಲವತ್ತುಕೊಂಡರೂ ವೈದ್ಯಾಧಿಕಾರಿ ಅವರು ನಮಗೆ ಬೆದರಿಕೆ ಹಾಕಿ ಕಳುಹಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಆಶಾ ಕಾರ್ಯಕರ್ತೆ ಮಹಾಲಕ್ಷ್ಮಿ ಮಾತನಾಡಿ, ಪ್ರತಿದಿನವೂ ಸೋಂಕಿತರ ಮನೆಗೆ ಹೋಗಿ, ಪರೀಕ್ಷೆ ಮಾಡಿ, ಸೋಂಕಿತರನ್ನು ಪತ್ತೆ ಮಾಡಬೇಕು. ಸೋಂಕಿತರ ಕುಟುಂಬದಲ್ಲಿರುವವರ ಮಾಹಿತಿಯನ್ನು ದಾಖಲೆ ಸಹಿತ ಪಡೆದುಕೊಳ್ಳಬೇಕು. ಆದರೂ ವೈದ್ಯಾಧಿಕಾರಿಗಳು ನಮ್ಮ ಸುರಕ್ಷತೆಯತ್ತ ಗಮನ ಹರಿಸುತ್ತಿಲ್ಲ ಎಂದು ದೂರಿದರು.

ಆಶಾ ಕಾರ್ಯಕರ್ತೆ ರಾಜೇಶ್ವರಿ ಮಾತನಾಡಿ, ಸೋಂಕಿತರಿಗೆ ಸರ್ಕಾರದಿಂದ ಬರುವ ಮಾತ್ರೆಗಳನ್ನೂ ವೈದ್ಯರು ಕೊಡುತ್ತಿಲ್ಲ. ಈ ಬಗ್ಗೆ ಕೇಳಿದರೆ, ರಾಜೀನಾಮೆ ಕೊಟ್ಟು ಹೋಗುವಂತೆ ಡಾ. ಲೋಕೇಶ್ ಬೆದರಿಕೆ ಹಾಕುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಇಂಡ್ಲವಾಡಿ ವ್ಯಾಪ್ತಿಯಲ್ಲಿ 350ಕ್ಕೂ ಹೆಚ್ಚು ಪ್ರಕರಣಗಳಿವೆ. ನಾವೆಲ್ಲರೂ ಹಗಲಿರುಳು ಕೆಲಸ ಮಾಡುತ್ತಿದ್ದೇವೆ ಎಂದರು.

ಗ್ರಾಪಂ ಅಧ್ಯಕ್ಷರ ಸಂಧಾನ: ಸುರಕ್ಷತಾ ಕಿಟ್‌ಗಾಗಿ ಆಶಾ ಕಾರ್ಯಕರ್ತೆಯರು ಮತ್ತು ವೈದ್ಯರ ನಡುವೆ ಗಲಾಟೆ ಆಗುತ್ತಿರುವುದನ್ನು ಅರಿತ ಗ್ರಾಪಂ ಅಧ್ಯಕ್ಷ ಬೆಟ್ಟಪ್ಪ ಸ್ಥಳಕ್ಕೆ ಆಗಮಿಸಿ, ರಾಜಿಸಂಧಾನ ನಡೆಸಿದರು. ಆದರೂ, ನಮಗೆ ಸುರಕ್ಷತಾ ಪರಿಕರ ಕೊಡದಿದ್ದರೆ, ಕೆಲಸ ಮಾಡುವುದಿಲ್ಲ. ಬದಲಿಗೆ ಸಾಮೂಹಿಕ ರಾಜೀನಾಮೆ ಕೊಡುತ್ತೇವೆ ಎಂದು ಆಶಾ ಕಾರ್ಯಕರ್ತೆಯರು ಬೆದರಿಕೆ ಹಾಕಿ, ತೆರಳಿದರು.

ಆಶಾ ಕಾರ್ಯಕರ್ತೆಯರಿಗೆ ಎಲ್ಲ ರೀತಿಯ ಸುರಕ್ಷತಾ ಕಿಟ್ ಒದಗಿಸಲಾಗಿದೆ. ಆದರೆ ಬುಧವಾರ ಸರ್ಕಾರದಿಂದ ಬಂದ ಕಿಟ್‌ಗಳನ್ನು ಆಶಾ ಕಾರ್ಯಕರ್ತೆಯರೇ ನೇರವಾಗಿ ಹಂಚಿಕೊಂಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಡಾ. ಲೋಕೇಶ್, ವೈದ್ಯಾಧಿಕಾರಿ ವೈದ್ಯಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಕಿತ್ತಾಡಿಕೊಳ್ಳುವ ಸಮಯ ಇದಲ್ಲ. ಇಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡಿ, ಕರೊನಾ ಪಿಡುಗಿನ ನಿರ್ಮೂಲನೆಗೆ ಸಹಕರಿಸಬೇಕು. ಬೆಟ್ಟಪ್ಪ, ಇಂಡ್ಲವಾಡಿ ಗ್ರಾಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net