

ರೋಣ: ಕರೊನಾ ಸಂದಿಗ್ಧ ಪರಿಸ್ಥಿತಿಯಲ್ಲೂ ಆಶಾ ಕಾರ್ಯಕರ್ತೆಯರು ಪ್ರತಿ ಮನೆ-ಮನೆಗೂ ಭೇಟಿ ನೀಡಿ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿರುವುದು ಕಾರ್ಯ ಸ್ತುತ್ಯಾರ್ಹ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ರೋಣ ತಾಲೂಕು ವೀರಶೈವ ಪಂಚಾಚಾರ್ಯ ವಿವಿಧೋದ್ದೇಶಗಳ ಸಹಕಾರಿ ಸಂಘ, ಕೆಸಿಸಿ ಬ್ಯಾಂಕ್, ಸಹಕಾರ ಇಲಾಖೆ ಮತ್ತು ಕೃಷಿ ಪತ್ತಿನ ಸಹಕಾರಿ ಸಂಘಗಳ ಆಶ್ರಯದಲ್ಲಿ ಕೋವಿಡ್-19 ಮಹಾಮಾರಿ ನಿಯಂತ್ರಣಕ್ಕೆ ಶ್ರಮಿಸಿದ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನದ ಚೆಕ್ ಅನ್ನು ಮಂಗಳವಾರ ವಿತರಿಸಿ ಅವರು ಮಾತನಾಡಿದರು.
ಬೆಂಗಳೂರಿನ ಪಾದರಾಯನಪುರ ಮತ್ತಿತರ ಕಡೆಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಕೆಲವರು ಕಿರುಕುಳ ನೀಡಿದರೂ ಅದಕ್ಕವರು ಬಗ್ಗದೇ ಧೈರ್ಯದಿಂದ ಕಾರ್ಯ ನಿರ್ವಹಿಸಿದರು. ಅವರ ಸೇವೆ ಶ್ಲಾಘನೀಯ ಎಂದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಜಿ.ಪಿ. ಪಾಟೀಲ ಮಾತನಾಡಿ, ಸಹಕಾರಿ ಬ್ಯಾಂಕ್ನಲ್ಲಿ ರೈತರ ಸಾಲ ಮನ್ನಾಕ್ಕೆ ಬೇಕಾಗಿರುವ ಕಾಗದ ಪತ್ರಗಳು ಹಾಗೂ ವಿವಿಧ ಕೆಲಸಗಳಿಗೆ ರೈತರು ತಹಸೀಲ್ದಾರ್ ಕಚೇರಿಗೆ ಹೋದರೆ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಅವರು ಸ್ಪಂದಿಸುತ್ತಿಲ್ಲ. ರೈತರು ನೀಡಿದ ದೂರಿನ ಮೇರೆಗೆ ಅವರಿಗೆ ದೂರವಾಣಿ ಕರೆ ಮಾಡಿ ಹೇಳಿದರೂ ಕ್ಯಾರೇ ಎನ್ನುತ್ತಿಲ್ಲ ಎಂದು ಆರೋಪಿಸಿದರು.
ಅನ್ನಪೂರ್ಣಾ ಹೂಗಾರ, ರೇಣುಕಾ ಪರಸಣ್ಣನವರ, ರೇಣುಕಾ ಗುಜಮಾಗಡಿ, ಮಂಜುಳಾ ತಾಳಗಿ, ಮಹಾದೇವಿ ನೀರಲೋಟಿ, ಶೈಲಾ ರುದ್ರಗೌಡರ, ಸುನಂದಾ ಜಂತ್ಲಿ, ವಿಜಯಲಕ್ಷ್ಮೀ ಹನುಮಸಾಗರ, ಲಲಿತಾ ಚೋಳನಗೌಡರ ಸೇರಿದಂತೆ 100 ಆಶಾ ಕಾರ್ಯಕರ್ತೆಯರಿಗೆ ತಲಾ 5 ಸಾವಿರ ರೂ. ದಂತೆ ಪ್ರೋತ್ಸಾಹಧನದ ಚೆಕ್ ವಿತರಿಸಲಾಯಿತು.
ಶಾಸಕ ಕಳಕಪ್ಪ ಬಂಡಿ, ಎಪಿಎಂಸಿ ಅಧ್ಯಕ್ಷ ರಾಜಣ್ಣ ಹೂಲಿ, ಅನಿಲ ಪಲ್ಲೇದ, ಇತರರಿದ್ದರು.
EndFragment