‘ಆಳ್ವಿಕೆ ಸಂಸಾರ’ ಮಾಡದ ನವಪಕ್ಷದ ಕಡೆಗೆ ಜನರ ಒಲವು

1
Published on

ಮೈಸೂರು: ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಂತಹ ‘ಆಳ್ವಿಕೆಯ ಸಂಸಾರ’ ಮಾಡಿದ ಪಕ್ಷಗಳನ್ನು ಹೊರತುಪಡಿಸಿ, ಈವರೆಗೂ ಆಳ್ವಿಕೆ ಸಂಸಾರ ಮಾಡದೆ ಇರುವ ನವಪಕ್ಷದ ಕಡೆಗೆ ಮತದಾರರ ಒಲವು ಹೆಚ್ಚಾಗುತ್ತಿದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಹೇಳಿದರು.


ಪ್ರೊ.ಮಧು ದಂಡವತೆ ಜನ್ಮ ಶತಮಾನೋತ್ಸವ ಅಂಗವಾಗಿ ಸಮಾಜವಾದಿ ವೇದಿಕೆ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಜನತಂತ್ರದ ನೈಜ ಹಕ್ಕುದಾರರ ಧ್ವನಿ ಹಿಡಿದಿಡುವ ‘ಡಯೋಗ್ನೋಸ್ಟಿಕ್’ ವರದಿ ಬಿಡುಗಡೆ ಮತ್ತು ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ನವಪಕ್ಷದ ಕಡೆಗೆ ಶೇ. 46ರಷ್ಟು ಒಲವಿರುವುದಾಗಿ ವರದಿಯಲ್ಲಿ ಉಲ್ಲೇಖವಾಗಿದ್ದು, ಇದು ಮೇಲ್ನೋಟಕ್ಕೆ ಶುಭ ಸೂಚನೆ ಎಂದರು.
ಈಗ ಕರ್ನಾಟಕದ ಮುಖ್ಯಮಂತ್ರಿ ಯಾರು ಎಂದು ಪ್ರಶ್ನಿಸಿದರೆ ನರೇಂದ್ರ ಮೋದಿ, ಅಮಿತ್ ಷಾ ಎನ್ನುವಷ್ಟು ಜನಪ್ರಿಯವಾಗುತ್ತಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ ಇವರಿಬ್ಬರು ಅಷ್ಟೊಂದು ಓಡಾಡುತ್ತಿದ್ದಾರೆ. ಇನ್ನೂ ಒಂದು ಕಸಿಪದ ತುಂಬ ಪ್ರವರ್ಧಮಾನಕ್ಕೆ ಬಂದಿದೆ. ಅದುವೇ ‘ಮೋದಾನಿ’. ಈ ಪದ ಒಳಹೊಕ್ಕರೆ ನಾನಾ ಅರ್ಥ ಹೇಳುತ್ತಿದೆ. ಮೋದಿ ಮತ್ತು ಅದಾನಿ ಸೇರಿ ಒಂದೇ ಪದ, ಒಂದೇ ಹೆಸರು. ಅಧಿಕಾರ ಮತ್ತು ಕುರುಡು ಕಾಂಚಾಣ ಎರಡೂ ಕೂಡಿ ಒಂದೇ ಆಗಿದೆ. ಉಳಿಗಾಲವಿಲ್ಲ ಎಂಬ ಕೇಡುಗಾಲದಲ್ಲಿ ಚುನಾವಣೆ ಬಂದಿದೆ ಎಂದರು.


ರಾಜ್ಯದ ಮುನ್ನಡೆಯ ಸಮಾಜಮುಖಿ ರಾಜಕೀಯ ಪಕ್ಷಗಳು ಅಲೆ ಎಬ್ಬಿಸುತ್ತಿಲ್ಲ. ರಾಜಕೀಯ ಪಕ್ಷಗಳಿಗೆ ಸಾಂಸ್ಥಿಕ ರಚನೆ ಗಟ್ಟಿಯಾಗಿದೆ. ಆದರೆ, ಈ ಸಾಂಸ್ಥಿಕ ರಚನೆಯಲ್ಲಿ ರಾಜಕೀಯ ಪ್ರಜ್ಞೆಯ ಕೊರತೆ ಅನುಭವಿಸುತ್ತಿವೆ. ತನ್ನ ರಾಜಕೀಯ ಪಕ್ಷದ ಗೆಲುವಿನಲ್ಲೇ ತನ್ನ ಅಳಿವು ಉಳಿವು ಇರುವುದಾಗಿ ಸಂಘಪರಿವಾರ ತಿಳಿದುಕೊಂಡಿದೆ. ಆದರೆ, ಮುನ್ನಡೆಯ ಪಕ್ಷಗಳ ಸಾಂಸ್ಥಿಕ ರಚನೆಗಳು ಈ ರೀತಿ ವರ್ತಿಸುತ್ತಿಲ್ಲ ಎಂದರು.


ಆಮ್ ಆದ್ಮಿ ಪಕ್ಷಕ್ಕೆ ಸಾಂಸ್ಥಿಕ ರಚನೆ ಇಲ್ಲ. ಅದು ಅಲೆ ಎಬ್ಬಿಸುತ್ತಿರುವುದನ್ನು ಕಡೆಗಣಿಸುವಂತಿಲ್ಲ. ಆದರೆ, ಎಎಪಿ ‘ಒಂಟಿ ಬಡಕ ಸುಂಟರಗಾಳಿ’ ಎಂಬಂತೆ ಯಾರೊಡನೆಯೂ ಕೂಡುತ್ತಿಲ್ಲ. ಸಮಾಜಮುಖಿ, ರಚನಾತ್ಮಕ, ಮುನ್ನಡೆಯ ರಾಜಕೀಯ ಪಕ್ಷಗಳ ತಳ ಮಟ್ಟದ ಸಾಂಸ್ಥಿಕ ರಚನೆಗಳಿಗೆ ರಾಜಕೀಯ ಪ್ರಜ್ಞೆ ಇದೆ. ಬಹುಶಃ ಯಾರೂ ಇದರ ಮುಂದೆ ನಿಲ್ಲಲಾರರು ಎಂದರು.
ತಳಮಟ್ಟದವರೆಗೂ ಬೇರೂರಿರುವ ವಿವಿಧ ಪ್ರಗತಿಪರ ಸಂಘ-ಸಂಸ್ಥೆಗಳೊಂದಿಗೆ ಯುವ ಕಾರ್ಯಕರ್ತರ ಪಡೆ ಹೊಸ ರಾಜಕೀಯ ಪ್ರಯೋಗಕ್ಕೆ ಸಾಂಸ್ಥಿಕ ರಚನೆಯನ್ನು ಒದಗಿಸಬಹುದು. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಅಲೆ ಎಬ್ಬಿಸಬೇಕು ಎಂದು ಹೇಳಿದರು.


ಸ್ವತಂತ್ರ ಅಧ್ಯಯನ ತಂಡದ ಮುಂದಾಳು ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಮಾತನಾಡಿ, ಶೇ.45ರಷ್ಟು ಸಂಘಟನೆಗಳ ಹೋರಾಟ ವಿಚಾರಗಳು, ಶೇ.37 ಸುಳ್ಳು ನಿರೂಪಣೆಗಳು-ಹಣದ ಆಮಿಷ, ಶೇ.43ರಷ್ಟು ಕೋಮುಗಲಭೆ-ಮತೀಯ ವಿವಾದ, ಶೇ.20ರಷ್ಟು ಅಧಿಕಾರರೂಢ ಬಿಜೆಪಿ ಸಾಧನೆ ಎಂಬ ನಿರ್ಣಾಯಕ ವಿಚಾರಗಳ ಮೇಲೆ ವಿಧಾನಸಭೆ ಚುನಾವಣೆ ನಡೆಯಲಿದೆ. ಇದುವೇ ವರದಿಯಲ್ಲಿ ವ್ಯಕ್ತವಾಗಿದೆ ಎಂದು ತಿಳಿಸಿದರು.


ರಾಜ್ಯದ 20 ಜಿಲ್ಲೆಗಳಿಂದ ಎಲ್ಲ ವಯಸ್ಸು, ಶೈಕ್ಷಣಿಕ ಹಿನ್ನೆಲೆಯ ವಿವಿಧ ಜಾತಿ, ಧರ್ಮಗಳ ಸಾವಿರಕ್ಕೂ ಮಿಕ್ಕ ಮತದಾರರ ಕ್ಷಿಪ್ರ ಸಮೀಕ್ಷೆಯನ್ನು 2022ರ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಕೈಗೊಳ್ಳಲಾಗಿದೆ. ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ, ಕೋವಿಡ್ ಸಮರ್ಪಕವಾಗಿ ನಿರ್ವಹಿಸದಿರುವ ಬೇಸರ ರಾಜ್ಯದ ಜನರಲ್ಲಿ ಅದರಲ್ಲೂ ರೈತರಲ್ಲಿ ಅಧಿಕವಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಜರುಗಿದ ಕೋಮು ಗಲಭೆ, ಮತೀಯ ವಿವಾದಗಳು ‘ಸಹಜವಾಗಿ ಹುಟ್ಟಿರುವುದಲ್ಲ, ಸೃಷ್ಟಿಸಿರುವುದು’ ಎಂಬುದು ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುಪಾಲು ಮತದಾರರ ಆತಂಕವಾಗಿದೆ ಎಂದು ಹೇಳಿದರು.


ರಾಜಕೀಯ ವಿಮರ್ಶಕ ಸುಧೀಂದ್ರ ಕುಲಕರ್ಣಿ, ನವದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಪ್ರೊ.ಡಿ.ಕೆ.ಗಿರಿ, ಸಮಾಜವಾದಿ ಧುರೀಣ ಬಿ.ಆರ್.ಪಾಟೀಲ್, ವಿಶ್ರಾಂತ ಕುಲಪತಿ ಡಾ.ಸಬಿಹಾ ಭೂಮಿಗೌಡ, ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸಾಮಾಜಿಕ ಕಾರ್ಯಕರ್ತ ಅನೀಸ್ ಪಾಷ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net