

ಆಳಂದ: ಶರಣನಗರದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಳಾಂತರಿಸದAತೆ ಶಾಸಕರಿಗೆ ಮನವಿ ಮಾಡಿ, ಇಲ್ಲಿನ ನೈಜ ಸ್ಥಿತಿ-ಗತಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಷ್ಟೆ ನನ್ನ ಕೆಲಸ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ತಿಳಿಸಿದರು.
ಶರಣ ನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಅವರು, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ನಾವು ಕೆಲಸ ಮಾಡಬೇಕಾಗುತ್ತದೆ. ಸ್ಥಳೀಯ ಆಗು- ಹೋಗುಗಳನ್ನು ಶಾಸಕರೊಂದಿಗೆ ಚರ್ಚೆ ಮಾಡಿ. ನಿಮ್ಮ ಸಮಸ್ಯೆಗಳಿಗೆ ಅವರೇ ಪರಿಹಾರ ಕಲ್ಪಿಸುತ್ತಾರೆ. ಜಿಲ್ಲಾಧಿಕಾರಿಗಳ ಆದೇಶದಂತೆ ಪರಿಶೀಲನೆಗೆ ಬಂದಿದ್ದೇನೆ ಎಂದರು.
ಪುರಸಭೆ ಸದಸ್ಯೆ ವಿಜಯಲಕ್ಷ್ಮೀ ಷಣ್ಮುಖ, ಮಾಜಿ ಸದಸ್ಯ ಗುರುನಾಥ ಕಳಸೆ, ಪ್ರಮುಖರಾದ ಚಂದ್ರಶೇಖರ ಮುನ್ನೋಳ್ಳಿ, ಸಿದ್ದು ಆಲಮದ, ಮಲ್ಲಿಕಾರ್ಜುನ ಪಗಡೆ, ನಾಗರಾಜ ಭೋರಾಮಣಿ, ಮಹೇಶ ಕುಲಕರ್ಣಿ, ಶ್ರೀಶೈಲ ಬೇಲೆ, ಬಸವರಾಜ ಮಸುಂದೆ, ಸತೀಶ, ಕಸ್ತೂರಬಾರಿ ಉಳ್ಳೆ, ಶ್ರೀದೇವಿ ಉಟಗಿ, ಮಾನಂದಾ ಮಾಳಿ ಸೇರಿ ಸುಮಾರು 200ಕ್ಕೂ ಹೆಚ್ಚು ಜನರಿದ್ದರು.
ಆಸ್ಪತ್ರೆ ಸ್ಥಳಾಂತರಿಸಿದರೆ ಹೋರಾಟ: ಆಳಂದನ ಶರಣ ನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಜಶೇಖರ ಮಾಲಿ ಅವರಿಗೆ ಸ್ಥಳೀಯರು ಕೇಂದ್ರ ಸ್ಥಳಾಂತರಿಸದAತೆ ಮನವಿ ಮಾಡಿದರು. ಇಲ್ಲಿನ ಕೇಂದ್ರ ಸುಮಾರು 5-6 ವಾರ್ಡ್ ಜನತೆಗೆ ಅನುಕೂಲವಾಗುತ್ತಿದೆ. ಅಲ್ಲದೆ ಸಮರ್ಪಕ ಆರೋಗ್ಯ ಸೇವೆ ಸಿಗುತ್ತಿದೆ. ಈ ಹಿಂದೆ ಶಾಸಕ ಬಿ.ಆರ್.ಪಾಟೀಲ್ ಅವರೇ ಸ್ಥಾಪಿಸಿದ ಹಾಸ್ಪಿಟಲ್ ಇದಾಗಿದೆ. ಇದೀಗ ಇದ್ದಕ್ಕಿದ್ದ ಹಾಗೆ ದರ್ಗಾ ಪ್ರದೇಶಕ್ಕೆ ಸ್ಥಳಾಂತರಿಸದರೆ ನಾವೇನು ಮಾಡಬೇಕು ? ಅವಶ್ಯವಿದ್ದರೆ ದರ್ಗಾ ಪ್ರದೇಶದಲ್ಲಿ ಮತ್ತೊಂದು ಆರೋಗ್ಯ ಕೇಂದ್ರ ಸ್ಥಾಪಿಸಿ. ಕೂಡಲೇ ಪ್ರಸ್ತಾವನೆ ವಾಪಸ್ ಪಡೆಯಿರಿ. ಇದಾಗ್ಯೂ ಹಾಸ್ಪಿಟಲ್ ಸ್ಥಳಾಂತರಿಸಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪುರಸಭೆ ಹಾಲಿ ಹಾಗೂ ಮಾಜಿ ಸದಸ್ಯರು, ಮಹಿಳೆಯರು ಎಚ್ಚರಿಕೆ ನೀಡಿದರು.