ಆಳಂದ; ನಕಲಿ ಪತ್ರಕರ್ತರ ಹಾವಳಿ ತಡೆಯಿರಿ

PH 04
Published on

ಆಳಂದ: ತಾಲ್ಲೂಕಿನಲ್ಲಿ ದಿನೇ ದಿನೇ ನಕಲಿ ಪತ್ರಕರ್ತರ ಹಾಗೂ ಯುಟೂಬ್ ಚಾನಲಗಳ ಹಾವಳಿ ಹೆಚ್ಚಾಗಿದ್ದು, ಇದ್ದರಿಂದ ಮಾಧ್ಯಮಕ್ಕೆ ಧಕ್ಕೆ ಆಗುತ್ತಿದೆ. ಕೂಡಲೇ ಇಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾಲ್ಲೂಕು ಘಟಕದಿಂದ ಗ್ರೇಡ-2 ತಹಶೀಲ್ದಾರ್​ ಭೀಮಣ್ಣಾ ಕುದುರಿ, ಆರಕ್ಷಕ ನಿರೀಕ್ಷಕ ಮಹಾದೇವ ಪಂಚಮುಖಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ಪತ್ರಕರ್ತರೆಂದು ಹೇಳಿಕೊಂಡು ಕೆಲವರು ತಾಲೂಕಿನ ಸರಕಾರಿ ಕಚೇರಿಗಳು, ಶಾಲಾ-ಕಾಲೇಜು, ಉದ್ಯಮ ಸಂಸ್ಥೆಗಳು, ಸಾರ್ವಜನಿಕರ ಅಂಗಡಿ-ಮುಂಗಟ್ಟುಗಳಿಗೆ ತೆರಳಿ ಹೆದರಿಸಿ-ಬೆದರಿಸಿ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಂತೂ ಅಂಗನವಾಡಿ ಕೇಂದ್ರ, ಗ್ರಾಪಂ, ಸರಕಾರಿ, ಖಾಸಗಿ ಶಾಲೆಗಳಿಗೆ ತೆರಳಿ ತಾವು ಟಿವಿ ಮಾಧ್ಯಮದವರು ಎಂದು ಹೇಳಿ ಮೋಬೈಲ್​ನಲ್ಲಿ ಚಿತ್ರೀಕರಿಸುತ್ತಾ ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸುವ ಬಗ್ಗೆ ಸಂಘಕ್ಕೆ ಸಾಕಷ್ಟು ದೂರು ಬಂದಿವೆ ಎಂದು ಕಿಡಿಕಾರಿದರು.

ಸಾಮಾಜಿಕ ಜಾಲತಾಣದ ಸುದ್ದಿವಾಹಿನಿಯವರು ಎಂದು ಹೇಳಿ ನಿಯಮ ಬಾಹಿರವಾಗಿ ವಿವಿಧ ಲೋಗೋ ಹಿಡಿದುಕೊಂಡು ಸರಕಾರಿ ಅಧಿಕಾರಿಗಳು, ಸಾರ್ವಜನಿಕರಿಗೆ ಕಿರುಕುಳ ಕೊಡುತ್ತಿರುವ ಘಟನೆ ನಡೆಯುತ್ತಿವೆ. ಇದಲ್ಲದೆ ತಮ್ಮ ವಾಹನಗಳ ಮೇಲೆ ಪ್ರೆಸ್ & ಮೀಡಿಯಾ ಎಂದು ಬರೆದುಕೊಂಡು ಸಂಚರಿಸುತ್ತಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿ ಪ್ರಶ್ನಿಸುವ ಪೋಲಿಸರೊಂದಿಗೆ ವಾಗ್ವಾದ ನಡೆಸುತ್ತಾರೆ ಎಂದು ದೂರುಗಳ ಬಂದಿವೆ, ಇಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದು ಅವಶ್ಯಕವಾಗಿದೆ ಎಂದು ಒತ್ತಾಯಿಸಿದರು.

ತಾಲ್ಲೂಕು ಘಟಕದ ಉಪಾಧ್ಯಕ್ಷ ಶಾಂತಪ್ಪ ಕೋರೆ, ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಹಿರೇಮಠ, ಸಂಘಟನಾ ಕಾರ್ಯದರ್ಶಿ ಜಗದೀಶ ಕೋರೆ ಹಾಗೂ ಪತ್ರಕರ್ತರಾದ ಪ್ರಭಾಕರ ಸಲಗರೆ, ಚಂದ್ರಶೇಖರ ಜಂಗಲೇ, ಶಿವಲಿಂಗ ತೇಲ್ಕರ್, ಹಣಮಂತ ಕುಲಕರ್ಣಿ, ಪ್ರಕಾಶ ಜಂಗಲೇ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net