

ಆಳಂದ: ಸಾವಿರ ಪಂಚಾಯಿತಿ ಸಂಪೂರ್ಣ ಸಾಕ್ಷರತಾ ಕಾರ್ಯಕ್ರಮದಡಿ ಹೆಬಳಿ, ಪಡಸಾವಳಿ ಹಾಗೂ ಚಿಂಚನಸೂರ ಗ್ರಾಪಂಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇಲ್ಲಿ ಸಾಕ್ಷರತೆ ಕುರಿತು ಯಾವುದೇ ಕಾರ್ಯಕ್ರಮ ನಡೆಸದೆ, ಸರ್ಕಾರ ಹಣ ಲೂಟಿ ಮಾಡಲಾಗಿದೆ ಎಂದು ಪ್ರೇರಕರ ಒಕ್ಕೂಟದ ತಾಲೂಕು ಅಧ್ಯಕ್ಷ ಗುಂಡಪ್ಪ ರಾಮನ್ ದೂರಿದರು.
ಆಗಸ್ಟ್ ಮೊದಲನೇ ವಾರದಲ್ಲಿ ಕಾಟಾಚಾರದ ತರಬೇತಿಗಳನ್ನು ನಡೆಸಲಾಗಿದೆ. ಯಾವುದೇ ಕಲಿಕಾ ಸಾಮಗ್ರಿ ನೀಡಿಲ್ಲ, ಕಲಿಕಾ ಕೇಂದ್ರಗಳನ್ನು ಆರಂಭಿಸಿಲ್ಲ. ನಿಯಮಗಳ ಪ್ರಕಾರ ಮೂರು ತಿಂಗಳು ತರಗತಿಗಳು ನಡೆಯಬೇಕು, ಬಳಿಕ ಪರೀಕ್ಷೆಗಳನ್ನು ನಡೆಸಬೇಕು. ಆದರೆ ತಾಲೂಕಿನಲ್ಲಿ ಯಾವುದೇ ತರಗತಿ ನಡೆಸದೆ, ನೇರವಾಗಿ ಸೆ.6ರಂದು ಪರೀಕ್ಷೆ ಮಾಡಲಾಗುತ್ತಿದೆ. ಇದರಿಂದ ಅನಕ್ಷರಸ್ಥರು ಅವಿದ್ಯಾವಂತರಾಗಿಯೇ ಉಳಿಯಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
2022-23 ಮತ್ತು 2023-24ನೇ ಸಾಲಿನ ಘೋಷಿತ ಸಾವಿರ ಸಂಪೂರ್ಣ ಸಾಕ್ಷರತಾ ಕಾರ್ಯಕ್ರಮ ಹಳ್ಳಹಿಡಿದಿದೆ. ಕಲಬುರಗಿ ಜಿಲ್ಲೆಯಲ್ಲಿ ಸುಮಾರು 8282 ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಗುರಿ ಹೊಂದಲಾಗಿತ್ತು. ಈ ಕಾರ್ಯಕ್ರಮಕ್ಕೆ ಸರ್ಕಾರ 86.94 ಲಕ್ಷ ರೂ. ಮೀಸಲಿಟ್ಟಿತ್ತು. ಮೊದಲ ಕಂತು 28.98 ಲಕ್ಷ ರೂ. ಈಗಾಗಲೇ ಬಿಡುಗಡೆ ಮಾಡಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ತಾಲೂಕು ಸೇರಿ ಜಿಲ್ಲೆಯಲ್ಲಿಯೂ ಸಮರ್ಪಕವಾಗಿ ಸಾಕ್ಷರತಾ ಕಾರ್ಯಕ್ರಮ ನಡೆದಿಲ್ಲ ಎಂದು ಕಿಡಿಕಾರಿದರು.