

ಗೋಣಿಕೊಪ್ಪ: ಪರಿಶಿಷ್ಟ ಜಾತಿ ಮತ್ತು ಪಂಗಡ ಉಪಯೋಜನೆಗೆ ಮೀಸಲಿರಿಸಿದ್ದ ಹಣವನ್ನು ಬೇರೆ ಯೋಜನೆಗಳಿಗೆ ಉಪಯೋಗಿಸದೆ ದಲಿತರ ಅಭಿವೃದ್ಧಿಗೆ ಉಪಯೋಗಿಸಬೇಕು ಹಾಗೂ ಸರ್ಕಾರ ಹೊರಡಿಸಿರುವ ವೈಟ್ ಬೋರ್ಡ್ ವಾಹನ ಇರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ರದ್ದುಪಡಿಸುವ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಪೊನ್ನಂಪೇಟೆ ತಾಲೂಕು ಕಚೇರಿ ಮುಂದೆ ಆಲ್ ಇಂಡಿಯ ದಲಿತ್ ರೈಟ್ಸ್ ಮೂವ್‌ಮೆಂಟ್ ರಾಜ್ಯ ಸಂಚಾಲಕ ರಮೇಶ್ ಮಾಯಮುಡಿ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿದರು.
ಕೊಡಗು ಜಿಲ್ಲೆ ಮಲೆನಾಡು ಪ್ರದೇಶವಾಗಿರುವುದರಿಂದ ಸೀಮೆಎಣ್ಣೆ ಇಲ್ಲದೆ ಕಾರ್ಮಿಕ ವರ್ಗದವರಿಗೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಸೀಮೆಎಣ್ಣೆ ವಿತರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರಾಜ್ಯ ಸಂಚಾಲಕ ರಮೇಶ್ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕಾಗಿ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣದಲ್ಲಿ 11 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲು ತೀರ್ಮಾನಿಸಿರುವುದರಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭಿವೃದ್ಧಿಗೆ ಹಣದ ಕೊರತೆ ಎದುರಾಗಲಿದೆ. ಈ ಬಗ್ಗೆ ಸರ್ಕಾರ ಗಮನಹರಿಸಿ ದಲಿತರ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಆಗ್ರಹಿಸಿದರು.
ತಹಸೀಲ್ದಾರ್ ಪ್ರಶಾಂತ್ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರಗಳನ್ನು ರವಾನಿಸಲಾಯಿತು. ಪ್ರತಿಭಟನೆಯಲ್ಲಿ ಆಲ್ ಇಂಡಿಯ ದಲಿತ್ ರೈಟ್ಸ್ ಮೂವ್‌ಮೆಂಟ್ ರಾಜ್ಯ ಸಮಿತಿ ಸದಸ್ಯರಾದ ಬಿ.ಕೆ.ಶಾಂತಿ, ವೈ.ಎ.ಗೀತಾ, ಐ.ಎಂ.ಬೋಜಿ, ತಾಲೂಕು ಸಂಚಾಲಕ ಎಚ್.ಆರ್.ಪವನ್ ಮತ್ತಿತರರು ಪಾಲ್ಗೊಂಡಿದ್ದರು.