ಆಲೋಚನೆಯೊಂದಿಗೆ ಏಕಾಗ್ರತೆಯೂ ವೃದ್ಧಿ

Published on

ಹನೂರು: ಮಲೆಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠ ಆವರಣದಲ್ಲಿ ಶನಿವಾರ ವಿಶ್ವ ಯೋಗ ದಿನ ಅಂಗವಾಗಿ ವಿದ್ಯಾರ್ಥಿಗಳಿಂದ ಯೋಗಾಭ್ಯಾಸ ನಡೆಯಿತು.

ಸೂರ್ಯ ನಮಸ್ಕಾರ, ಶಿಲಭಾಸನ, ವೃಕ್ಷಾಸನ, ಪಾದಾಸನ ಸೇರಿದಂತೆ ಇತರ ಆಸನಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಧನರಾಜು ಯೋಗದ ವಿವಿಧ ಭಂಗಿಗಳನ್ನು ಹೇಳಿಕೊಟ್ಟರು. ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೈಹಿಕ ನಿಯಂತ್ರಣದಲ್ಲಿ ಹಿಡಿತ ಇಲ್ಲದಿರುವುದರಿಂದ ಮನುಷ್ಯ ಹಲವು ಒತ್ತಡಗಳಿಗೆ ಒಳಗಾಗುತ್ತಿದ್ದಾನೆ. ಉತ್ತಮ ಆರೋಗ್ಯ ಹೊಂದಲು ಯೋಗ ಸಹಕಾರಿ. ಯೋಗವು ಪ್ರಾಚೀನ ಪಾರಂಪರಿಕ ಇತಿಹಾಸ ಹೊಂದಿದ್ದು, ವ್ಯಕ್ತಿಯ ಮನಸ್ಸು, ಶರೀರ ಹಾಗೂ ಆಲೋಚನೆಗಳನ್ನು ವೃದ್ಧಿಸುವುದರ ಮೂಲಕ ಏಕಾಗ್ರತೆ ಹೆಚ್ಚಿಸುತ್ತದೆ ಎಂದರು.

ಪ್ರಸ್ತುತ ಎಲ್ಲ ದೇಶಗಳು ಯೋಗಾಭ್ಯಾಸದಲ್ಲಿ ತೊಡಗಿಕೊಂಡಿದ್ದು, ಜಾಗತಿಕ ಆಂದೋಲನವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಜೀವನದಲ್ಲಿ ನಿರಂತರವಾಗಿ ಯೋಗ ಮಾಡುವುವನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು. ಮುಖ್ಯ ಶಿಕ್ಷಕರಾದ ಶಿವಕುಮಾರಸ್ವಾಮಿ, ಕೆಂಪಸಿದ್ದು, ಮಹದೇವ ಪ್ರಭುಸ್ವಾಮಿ, ಮಹದೇವ, ವೆಂಕಟೇಶ್, ಮಾಲಾಮಣಿ, ಮಹೇಶ್, ಶಿಕ್ಷಕರಾದ ಅಮರಾವತಿ, ಮಹೇಶ್ವರಿ, ಸಿದ್ದಲಿಂಗಮ್ಮ, ಮಾದಲಾಂಬಿಕೆ, ನಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net