ಆಲೋಚನೆ ಪೂರ್ಣ ಗುರಿತ್ತ ಇರಲಿ

20kglphoto-5...
ಕೊಳ್ಳೇಗಾಲ ಪಟ್ಟಣದ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ದ್ವಿತೀಯ ಪಿಯು ವಿದ್ಯಾರ್ಥಿಗಳಿಂದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ 2022-23ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನ ಸನ್ಮಾನಿಸಲಾಯಿತು. ಬಿ.ಆರ್.ಮಹೇಶ್, ಡಾ.ಎಸ್.ದತ್ತೇಶ್ ಕುಮಾರ್, ನಾಗರಾಜು, ಕೃಷ್ಣೇಗೌಡ ಇದ್ದರು.
Published on

ಕೊಳ್ಳೇಗಾಲ: ವಿದ್ಯಾರ್ಥಿಗಳು ಐಎಎಸ್ ಹಾಗೂ ಕೆಎಎಸ್ ಸಾಧಿಸುವ ಗುರಿ ಇಟ್ಟುಕೊಂಡು ಚೆನ್ನಾಗಿ ಓದಬೇಕು ಎಂದು ಉಪವಿಭಾಗಧಿಕಾರಿ ಬಿ.ಆರ್.ಮಹೇಶ್ ಹೇಳಿದರು.

ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ದ್ವಿತೀಯ ಪಿಯು ವಿದ್ಯಾರ್ಥಿಗಳಿಂದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ಗುರಿ ಮುಟ್ಟಬೇಕಾದರೆ ವಿದ್ಯಾರ್ಥಿಗಳ ಆಲೋಚನೆ ಸಂಪೂರ್ಣವಾಗಿ ಗುರಿಯತ್ತ ಕೇಂದ್ರಿಕೃತವಾಗಿರಬೇಕು. ಅದಕ್ಕೆ ಬೇಕಾದ ಸಿದ್ಧತೆಯನ್ನು ಚಾಚೂ ತಪ್ಪದೇ ಶ್ರದ್ಧೆಯಿಂದ ಮಾಡಬೇಕು. ಪಿಯು ಓದಿನ ಮುಖ್ಯಘಟ್ಟವಾಗಿದ್ದು, ಈ ಅವಧಿಯಲ್ಲಿ ವ್ಯಾಸಂಗದ ಕಡೆಗೆ ಸಂಪೂರ್ಣ ಗಮನ ನೀಡಬೇಕು ಎಂದು ಹೇಳಿದರು.
ಬ್ಯಾಂಕಿಂಗ್, ಮೆಡಿಕಲ್, ಇಂಜಿನಿಯರಿಂಗ್, ಕೆಎಎಸ್- ಐಎಎಸ್ ಮೊದಲಾದ ಕಡೆಗೆ ನಿಮ್ಮ ಗುರಿಯನ್ನು ಇಟ್ಟುಕೊಳ್ಳಿ. ಮನೆಯಲ್ಲಿ ಪಾಲಕರ ಕಷ್ಟಗಳನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕು ಎಂದರು.

ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎಸ್.ದತ್ತೇಶ್‌ಕುಮಾರ್ ಮಾತನಾಡಿ, ಇಂದು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಕೇತಿಕವಾಗಿ ಸನ್ಮಾನ ಮಾಡಲಾಗಿದೆ. ಮುಂದೆ ನಡೆಯುವ ಮಾನಸೋತ್ಸವದಲ್ಲಿ ಮತ್ತೆ ಅತ್ಯುನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದರು.

ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದರೆ 1 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ದ್ವಿತೀಯ ಸ್ಥಾನ ಪಡೆದರೆ 50 ಸಾವಿರ ರೂ. ಬಹುಮಾನ ಕೊಡಲಾಗುತ್ತದೆ. ನಮ್ಮ ಕಾಲೇಜಿನ ವಿದ್ಯಾರ್ಥಿನಿ ಹರ್ಷಿತಾ ರಾಜ್ಯದಲ್ಲಿ 8ನೇ ಸ್ಥಾನ ಪಡೆದಿದ್ದಾರೆ. ಐಐಟಿಯಲ್ಲಿ ರ್ಯಾಂಕ್ ಪಡೆದಿರುವ ಕೊಳ್ಳೇಗಾಲದ ಪ್ರಥಮ ವಿದ್ಯಾರ್ಥಿನಿ. ಅವರಿಗೆ 25 ಸಾವಿರ ರೂ. ಬಹುಮಾನ ನೀಡಲಾಗುತ್ತದೆ ಎಂದರು.

ಅಂತೆಯೇ, ಜಿಲ್ಲೆಗೆ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿನಿ ಎಸ್.ಕೆ ನಂದಿತಾ ಪ್ರಥಮ ಸ್ಥಾನ ಪಡೆದಿದ್ದು, 10 ಸಾವಿರ ರೂ. ನಗದು ಬಹುಮಾನವನ್ನು ನೀಡಲಾಗುತ್ತದೆ ಎಂದರು. ಈ ಬಾರಿ ನೂರು ವಿವಿಧ ಶಾಲೆಗಳಿಂದ ಪ್ರಥಮ ಪಿಯುಗೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಎಲ್ಲರೂ ಉತ್ತಮ ರೀತಿಯಲ್ಲಿ ವ್ಯಾಸಾಂಗ ಮಾಡಿ ಸಾಧನೆ ಮಾಡಬೇಕು ಎಂದು ಹೇಳಿದರು.

ಈ ವೇಳೆ 2022-23 ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ಕೆಲವು ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಾನಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ನಾಗರಾಜು , ಪ್ರಾಂಶುಪಾಲ ಕೃಷ್ಣೇಗೌಡ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net