ಆಲೂರು ಸಾರ್ವಜನಿಕ ಆಸ್ಪತ್ರೆಗೆ ಡಯಾಲಿಸಿಸ್ ಉಪಕರಣ

IMG-20230428-WA0154
Published on

ಆಲೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶೀಘ್ರವೇ ಡಯಾಲಿಸಿಸ್ ಉಪಕರಣಗಳನ್ನು ಒದಗಿಸಲಾಗುವುದು ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮದ ಯೋಜನಾ ನಿರ್ದೇಶಕ ಡಾ.ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಆಸ್ಪತ್ರೆ ಆವರಣದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ನೀರಿನ ಟ್ಯಾಂಕ್ ಹಾಗೂ ಸಂಪುಗಳನ್ನು ಸ್ವಚ್ಛಗೊಳಿಸಿ ಅವುಗಳಿಗೆ ಬೀಗ ಹಾಕಬೇಕು. ಆಸ್ಪತ್ರೆ ಮುಂಭಾಗ ಅವಶ್ಯವಿರುವ ವಸ್ತುಗಳನ್ನು ತೆರವುಗೊಳಿಸಿ ಆವರಣದಲ್ಲಿ ಆಂಬುಲೆನ್ಸ್ ಸೇರಿದಂತೆ ಇತರ ವಾಹನಗಳು ಓಡಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.

ವೈದ್ಯರು ಹಾಗೂ ಸಿಬ್ಬಂದಿ ವಾಹನಗಳಿಂದಾಗಿ ಆಸ್ಪತ್ರೆ ಆವರಣದಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ. ಆಸ್ಪತ್ರೆ ಹೊರಭಾಗದಲ್ಲಿ ಅವುಗಳ ನಿಲುಗಡೆಗೆ ಪಟ್ಟಣ ಪಂಚಾಯಿತಿ ಅವರೊಂದಿಗೆ ಚರ್ಚಿಸಿ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಳ್ಳುವಂತೆ ಸೂಚಿಸಿದ ಅವರು, ಆಸ್ಪತ್ರೆ ಮುಂಭಾಗ ನಿಲ್ಲಿಸಿರುವ ಕೆಟ್ಟು ನಿಂತ ಹಳೆಯ ಆಂಬುಲೆನ್ಸ್‌ಗಳನ್ನು ಶೀಘ್ರ ಹಾಸನಕ್ಕೆ ಸ್ಥಳಾಂತರಿಸುವಂತೆ ತಿಳಿಸಿದರು.

ಆಸ್ಪತ್ರೆಗೆ ಅವಶ್ಯಕತೆ ಇರುವ ಸೌಲಭ್ಯಗಳ ಕುರಿತು ಮೇಲಧಿಕಾರಿಗೆ ಪತ್ರ ಬರೆಯುವಂತೆ ಸಂಬಂಧಪಟ್ಟವರಿಗೆ ತಿಳಿಸಲಾಗಿದೆ. ಅಲ್ಟ್ರಾಸೌಂಡ್ ಸ್ಕಾೃನಿಂಗ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಪ್ರಸೂತಿ ತಜ್ಞರಿಗೆ ಈ ಬಗ್ಗೆ ತರಬೇತಿ ಪಡೆಯಲು ಆದೇಶಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಆರ್.ಸಿ.ಎಚ್. ಅಧಿಕಾರಿ ಡಾ.ಚೇತನ್, ಸರ್ವೇಕ್ಷಣಾಧಿಕಾರಿ ಡಾ.ಶಿವಶಂಕರ್, ತಾಲೂಕು ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಜಯಪ್ರಕಾಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net