

ಆಲೂರು: ಬೆಳಕಿನ ಹಬ್ಬ ದೀಪಾವಳಿ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಮಂಗಳವಾರ ಹಾಗೂ ಬುಧವಾರ ಸಾರ್ವಜನಿಕರು ಸಂಭ್ರಮದಿಂದ ಆಚರಿಸಿದರು.
ಬೆಳಕಿನ ಹಬ್ಬದ ಪ್ರಯಕ್ತ ಪಟ್ಟಣದ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ, ಹಣ್ಣು, ತರಕಾರಿ ಹಾಗೂ ಬಾಳೆಎಲೆ, ಕಂದುಗಳ ವ್ಯಾಪಾರ ಜೋರಾಗಿಯೇ ಇತ್ತು. ಕೆಇಬಿ ಸರ್ಕಲ್ ಬಳಿ ಖಾಲಿ ಇರುವ ವಾಟೆಹೊಳೆ ಜಲಾಶಯದ ಕವರ್ ಡೆಕ್ ಬಳಿ ಪಟಾಕಿ ಅಂಗಡಿಗಳನ್ನು ಹಾಕಲಾಗಿತ್ತು. ಗ್ರಾಹಕರು ಸಾಲುಗಟ್ಟಿ ನಿಂತು ನಾನಾ ರೀತಿಯ ಸಿಡಿಮದ್ದು ಹಾಗೂ ಮಣ್ಣಿನ ಹಣತೆಗಳನ್ನು ಕೊಂಡುಕೊಳ್ಳುವ ದೃಶ್ಯ ಕಂಡುಬಂತು.
ದೇವಾಲಯಗಳಲ್ಲಿ ವಿಶೇಷ ಪೂಜೆ: ದೀಪಾವಳಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಅಡಿಬೈಲು ರಂಗನಾಥ ಸ್ವಾಮಿ, ತಾಳೂರು ಆಂಜನೇಯಸ್ವಾಮಿ, ಮರಸು ಗ್ರಾಮದ ತಿರುಮಲ ರಂಗನಾಥಸ್ವಾಮಿ, ಪಾಳ್ಯ ಲಕ್ಷ್ಮೀ ಜನಾರ್ದನಸ್ವಾಮಿ, ವಿಜಯದುರ್ಗ ಕ್ಷೇತ್ರದ ಉಡಸಲಮ್ಮ ಮತ್ಸಲಮ್ಮ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಅಲ್ಲದೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಜನರು ಮನೆಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಿಸುವ ಮೂಲಕ ಮಣ್ಣಿನ ದೀಪ ಹಚ್ಚಿ ಹಾಗೂ ಪಟಾಕಿಗಳನ್ನು ಸಿಡಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.