

ಕಲಬುರಗಿ: ಯಡ್ರಾಮಿ ತಾಲೂಕಿನ ಆಲೂರಿನ ಶ್ರೀ ನಂದಿ ಬಸವೇಶ್ವರರ ಕಾರ್ತಿಕ ಮಾಸದ ಮಂಗಲೋತ್ಸವದಲ್ಲಿ ಗ್ರಾಮದಲ್ಲಿ ಜನಿಸಿ, ಸರ್ಕಾರಿ ನೌಕರರಾದ ೬೫ ಜನರನ್ನು ಏಕಕಾಲಕ್ಕೆ ಸನ್ಮಾನಿಸಲಾಯಿತು.
ನಂದಿ ಬಸವ ಯುವ ವೇದಿಕೆ ಹಾಗೂ ಗ್ರಾಮಸ್ಥರಿಂದ ಹಮ್ಮಿಕೊಂಡ ವಿಭಿನ್ನ ಕಾರ್ಯಕ್ರಮದಲ್ಲಿ ರಸಮಂಜರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಇಡೀ ದಿನ ನಡೆದವು. ಸರ್ಕಾರಿ ನೌಕರರನ್ನು ಒಂದೇ ವೇದಿಕೆ ಕರಿಸಿ, ಸನ್ಮಾನಿಸಿ, ಅಭಿನಂದಿಸಿ ಇತರ ಯುವಕರಿಗೆ ಮಾದರಿಯಾಗಿ ಇರುವಂತೆ ಪ್ರೇರಣೆ ತುಂಬಲಾಯಿತು. ಸರ್ಕಾರಿ ನೌಕರರು ನಂದಿ ಬಸವೇಶ್ವರರ ದೇವಸ್ಥಾನಕ್ಕೆ ಧನಸಹಾಯ ನೀಡಿದರು. ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ, ವಿಜೇತರಾದವರಿಗೆ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ನೌಕರರು ಮಾತನಾಡಿ, ನಮ್ಮ ಊರಿನಲ್ಲಿ ಸರ್ಕಾರಿ ನೌಕರರನ್ನು ಸನ್ಮಾನಿಸಿದ್ದು, ಹೆಮ್ಮೆಯ ವಿಷಯ. ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳಿಂದ ಗ್ರಾಮದಲ್ಲಿ ಖುಷಿ, ಸಂಭ್ರಮದ ಜತೆಗೆ ಹುಟ್ಟಿದ ಊರಿನ ಬಂಧ ಶಾಶ್ವತವಾಗಿ ಉಳಿಯಲಿದೆ ಎಂದರು. ಸಾಯಬಣ್ಣ ಎಸ್. ಇತರರಿದ್ದರು. ಅಣವೀರಗೌಡ ಬಿರಾದಾರ ನಿರೂಪಣೆ ಮಾಡಿದರು.