ಆಲಮಟ್ಟಿ ಅರಣ್ಯ ಕಾರ್ಮಿಕರ ಮುಷ್ಕರ ಅಂತ್ಯ

Forestry laborers' strike end, alamati, payment of wages, chief engineer,
ಆಲಮಟ್ಟಿಯಲ್ಲಿ ಕಾರ್ಮಿಕರು ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಮುಖ್ಯ ಇಂಜಿನಿಯರ್ ಎಚ್.ಎನ್. ಶ್ರೀನಿವಾಸ ಭೇಟಿ ನೀಡಿ ಮಾತನಾಡಿದರು. ಡಿಎಫ್‌ಒ ರಾಜಣ್ಣ ನಾಗಶೆಟ್ಟಿ, ಆರ್.ಎಫ.ಓ ಮಹೇಶ ಪಾಟೀಲ ಇತರರಿದ್ದರು.
Published on

ಆಲಮಟ್ಟಿ: ಕಳೆದ ಮಂಗಳವಾರದಿಂದ ಆಲಮಟ್ಟಿ ಕೆಬಿಜೆಎನ್‌ಎಲ್ ಅರಣ್ಯ ಇಲಾಖೆಯ ಕಾರ್ಮಿಕರು ಆರು ತಿಂಗಳ ವೇತನ ಪಾವತಿಗೆ ಆಗ್ರಹಿಸಿ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ ಅಧಿಕಾರಿಗಳ ಭರವಸೆ ಮೇರೆಗೆ ಅಂತ್ಯವಾಯಿತು.

ಮುಖ್ಯ ಇಂಜಿನಿಯರ್ ಕಚೇರಿ ಎದುರು ಕಾರ್ಮಿಕರು ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಮುಖ್ಯ ಇಂಜಿನಿಯರ್ ಎಚ್.ಎನ್. ಶ್ರೀನಿವಾಸ ಶುಕ್ರವಾರ ಸಂಜೆ ಭೇಟಿ ನೀಡಿ ಮಾತನಾಡಿ, ಐದು ತಿಂಗಳ ವೇತನ ಬಿಲ್ ಆಗಿದ್ದು, ಒಂದೆರಡು ದಿನದಲ್ಲಿ ತಮ್ಮ ಖಾತೆಗೆ ಜಮೆಯಾಗಲಿದೆ. ಇನ್ನಿತರ ಬೇಡಿಕೆಗಳ ಕುರಿತು ಚರ್ಚೆ ನಡೆಸಿ ಬಗೆಹರಿಸೋಣ, ಸದ್ಯಕ್ಕೆ ಧರಣಿ ಹಿಂದಕ್ಕೆ ಪಡೆಯುವಂತೆ ತಿಳಿಸಿದ್ದಕ್ಕೆ ಕಾರ್ಮಿಕರು ಒಪ್ಪಿದರು.

ನಮ್ಮ ಸಮಸ್ಯೆಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಬಗೆಹರಿಸಬೇಕು, ಪ್ರತಿ ವರ್ಷ ಎರಡು ಜತೆ ಸಮವಸ್ತ್ರ ಒದಗಿಸಬೇಕು, ನೌಕರರಿಗೆ ಗುರುತಿನ ಚೀಟಿ ಒದಗಿಸಬೇಕು, ನೌಕರರ ಕೌಶಲ ಹಾಗೂ ಕೆಲಸಕ್ಕೆ ತಕ್ಕಂತೆ ವೇತನ ನೀಡಬೇಕು ಸೇರಿ ಇತರ ಬೇಡಿಕೆಯನ್ನು ಈಡೇರಿಸಲು ಕಾರ್ಮಿಕರು ಮನವಿ ಮಾಡಿದರು.

ಕಳೆದ ಮೂರು ದಿನಗಳಿಂದ ಬಂದ್ ಆಗಿದ್ದ ಆಲಮಟ್ಟಿಯ ವಿವಿಧ ಉದ್ಯಾನಗಳನ್ನು ಶುಕ್ರವಾರ ಬೆಳಗ್ಗೆಯೇ ಆರಂಭಿಸಲಾಯಿತು. ಮುಷ್ಕರ ನಡೆದರೂ ಬೇರೆ ಕಡೆಯಿಂದ ಅರಣ್ಯ ಕಾರ್ಮಿಕರನ್ನು ಕರೆಯಿಸಿ ಉದ್ಯಾನ ಆರಂಭಿಸಲಾಯಿತು.]'

ಮಲ್ಲಿಕಾರ್ಜುನ ಎಚ್.ಟಿ., ದ್ಯಾಮಣ್ಣ ಬಿರಾದಾರ, ಲಕ್ಷ್ಮಣ ಬ್ಯಾಲ್ಯಾಳ, ಮುತ್ತು ಬಡಿಗೇರ ಹಾಗೂ ಡಿಎಫ್‌ಒ ರಾಜಣ್ಣ ನಾಗಶೆಟ್ಟಿ, ಆರ್.ಎಫ.ಓ ಮಹೇಶ ಪಾಟೀಲ ಇತರರಿದ್ದರು.

ಮತ್ತೊಂದು ಕಾರ್ಮಿಕರ ತಂಡದ ಮನವಿ: ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ದಿನಗೂಲಿ ನೌಕರರ ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಿ ಮಾದರ ನೇತೃತ್ವದಲ್ಲಿ ಅರಣ್ಯ ಕಾರ್ಮಿಕರ ಮತ್ತೊಂದು ತಂಡದವರು ವಿವಿಧ ಅರಣ್ಯ ಹಾಗೂ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಆರು ತಿಂಗಳ ವೇತನವನ್ನು ಪಾವತಿಸಬೇಕು, ಇನ್ನೂ ಮುಂದೆ ಪ್ರತಿ ತಿಂಗಳು ವೇತನ ತಿಂಗಳ 5 ನೇ ತಾರಿಖಿನೊಳಗೆ ಪಾವತಿಸಬೇಕು, ಮಾನವೀಯ ದೃಷ್ಟಿಯಿಂದ ನಮ್ಮ ಸಮಸ್ಯೆಯನ್ನು ಆಲಿಸಿ ಪರಿಹರಿಸಬೇಕು, ಪೌರ ಕಾರ್ಮಿಕರಂತೆ ಅರಣ್ಯ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಮನವಿ ಮಾಡಿದರು.

ಸಂಘಟನೆಯ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಬಸಪ್ಪ ಗುಡಿಮನಿ, ಚಿದಾನಂದ ಕಾಂಬಳೆ, ಅಲ್ಲಾಸಾಬ್ ಮೆಟಗುಡ್ಡ, ಬಸವರಾಜ ತುಂಬರಮಟ್ಟಿ, ಅರಿಯಪ್ಪ ಗೌಡರ, ಗೋಪಾಲ ಚಲವಾದಿ, ಭೀಮಶಿ ಮಾದರ, ನಾಗನಗೌಡ ಪಾಟೀಲ, ರೇಣುಕಾ ಚಲವಾದಿ, ಶೋಭಾ ಗೌಡರ, ರುಕ್ಮವ್ವ ಚವ್ಹಾಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net