

ತುಮಕೂರು: ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಆಲದಮರ ಪಾರ್ಕ್ ನಿರ್ವಹಣೆ ಹೊಣೆಯನ್ನು ತುಮಕೂರು ಪ್ರೆಸ್ಕ್ಲಬ್ಗೆ ಹಸ್ತಾಂತರಿಸಲಾಯಿತು.
ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ಪಾರ್ಕ್ಗೆ ಭೇಟಿ ನೀಡಿ ಪಿಯು ಇಲಾಖೆ ಹಾಗೂ ಪ್ರೆಸ್ ಕ್ಲಬ್, ತುಮಕೂರು ಜತೆ ನಡೆದಿರುವ ಒಡಂಬಡಿಕೆಯ ಪ್ರತಿ ನೀಡುವ ಮೂಲಕ ಅಧಿಕೃತವಾಗಿ ಹಸ್ತಾಂತರಿಸಿದರು.
ಸಾಮಾಜಿಕ ಹೊಣೆಗಾರಿಕೆಯಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯವಾಗಿದೆ, ತುಮಕೂರು ಸ್ಮಾರ್ಟ್ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಪಾರ್ಕ್ನ ನಿರ್ವಹಣಾ ಜವಾಬ್ದಾರಿಯನ್ನು ಸಾಮಾಜಿಕ ಹೊಣೆಯಿಂದಲೇ ಪ್ರೆಸ್ ಕ್ಲಬ್ ವಹಿಸಿಕೊಂಡಿದೆ ಎಂದು ಸಿಎಂ ಶ್ಲಾಸಿದರು.
ಸದಾ ಒತ್ತಡದಲ್ಲಿರುವ ಪತ್ರಕರ್ತರು ಪಾರ್ಕ್ ನಿರ್ವಹಣೆಯ ಹೊಣೆ ಹೊತ್ತಿರುವುದು ದಿಟ್ಟ ಹೆಜ್ಜೆ ಎನಿಸಿದೆ. ಸಾಮಾಜಿಕ ಹೊಣೆಗಾರಿಕೆ ಹಾಗೂ ಪರಿಸರದ ಮೇಲಿನ ಪ್ರೀತಿ ಎದ್ದು ಕಾಣುತ್ತಿದೆ. ಇದನ್ನು ನಿರ್ವಹಣೆ ಮಾಡುವಾಗ ಬಹಳಷ್ಟು ಸಮಸ್ಯೆಗಳು ತನ್ನಿಂದ ತಾನೇ ಬಗೆಹರಿಯುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪರಿಸರ ಸಂರಕ್ಷಣೆಯ ಚಿಂತನೆ ನಮ್ಮ ಸರ್ಕಾರಕ್ಕೂ ಇದ್ದು ಬಜೆಟ್ನಲ್ಲಿ ಪ್ರಥಮ ಬಾರಿಗೆ ಪರಿಸರ ಆಯವ್ಯಯ ರೂಪಿಸಲಾಗಿದೆ. ಒಂದು ವರ್ಷದಲ್ಲಿ ಉಂಟಾಗುವ ಪರಿಸರ ನಷ್ಟದ ಪರಿಶೋಧನೆ ಮಾಡಿ, ಅರಣ್ಯ ಪ್ರದೇಶದ ಸಮತೋಲನ ಕಾಯ್ದುಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದರು.
ಪ್ರೆಸ್ಕ್ಲಬ್ ಉಪಾಧ್ಯರಾದ ಶ್ರೀನಿವಾಸರೆಡ್ಡಿ, ಜಿ.ಕರುಣಾಕರ್, ಮಾರುತಿ ಹಾಗೂ ಪ್ರಧಾನ ಕಾರ್ಯದರ್ಶಿ ಎಲ್.ಯೋಗೇಶ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಒಡಂಬಡಿಕೆ ಪತ್ರ ಸ್ವೀಕರಿಸಿದರು.
ಪ್ರೆಸ್ಕ್ಲಬ್ ಗೌರವ ಸದಸ್ಯರೂ ಆದ ಸಚಿವ ಆರಗ ಜ್ಞಾನೇಂದ್ರ, ಬಿ.ಸಿ.ನಾಗೇಶ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದಗೌಡ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ಧಿ ಬಯೋನ್ನ ಎನ್.ಜೆ.ರುದ್ರಪ್ರತಾಪ್, ಎನ್.ಎಸ್.ಸ್ಯಾರಿಸ್ನ್ನ ಎನ್.ಎಸ್.ನಾಗೇಂದ್ರಪ್ರಸಾದ್, ವಿಶ್ವಾಸ್ ಜುಯರ್ಲಸ್ನ್ನ ಟಿ.ಜೆ.ವಿಶ್ವಾಸ್, ಪರಿಸರ ಪ್ರೇಮಿಗಳಾದ ಟಿ.ವಿ.ಎನ್.ಮೂರ್ತಿ, ಜಿ.ಕೆ.ಶ್ರೀನಿವಾಸ್, ಜಿ.ಎಸ್.ಬಸವರಾಜು ಮತ್ತಿತರರು ಅಭಿಪ್ರಾಯ ಹಂಚಿಕೊಂಡರು.
ತುಮಕೂರು ಕಲ್ಪತರು ನಾಡು, ಇಲ್ಲಿನ ಮಣ್ಣು, ನೀರು ಶಕ್ತಿಯುತವಾಗಿರುವುದರಿಂದ ಅದ್ಭುತವಾದ ಫಲ ದೊರೆಯುತ್ತದೆ. ಶತಮಾನದ ಇತಿಹಾಸ ಹೊಂದಿರುವ ಆಲದ ಮರಗಳ ಸದುಪಯೋಗ ಇಲ್ಲಿನ ನಾಗರಿಕರಿಗಾಗಲಿ. ಪ್ರೆಸ್ ಕ್ಲಬ್ ತುಮಕೂರು ಸಾಮಾಜಿಕ ಹೊಣೆಗಾರಿಗೆ ಮೆಚ್ಚುವಂತಹದು. > ಬಸವರಾಜ ಬೊಮ್ಮಾಯಿ ಸಿಎಂ