

ಮೈಸೂರು: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೂ ಶೇ.10ರಷ್ಟು ಮೀಸಲಾತಿ ಕಲ್ಪಿಸಿರುವುದು ಅವಾಸ್ತವಿಕ. ಇದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಶೇ.4ರಷ್ಟು ಜನಸಂಖ್ಯೆ ಹೊಂದಿರುವ ಮೇಲ್ವರ್ಗದ ಸಮುದಾಯಕ್ಕೆ ಶೇ.10ರಷ್ಟು ಮೀಸಲಾತಿ ಸಿಗಲಿದೆ. ಇದರಿಂದಾಗಿ ದಲಿತ, ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಲಿದೆ. ಹೀಗಾಗಿ ಈ ಕುರಿತು ಪರಾಮರ್ಶಿಸಬೇಕು. ಇದನ್ನು ಪಕ್ಷದ ವೇದಿಕೆಯಲ್ಲೂ ಚರ್ಚಿಸಿ ಮುಂದೇನು ಮಾಡಬೇಕೆಂದು ತೀರ್ಮಾನ ಮಾಡಲಾಗುವುದು ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನವನ್ನು ಬುಡಮೇಲು ಮಾಡುವ ಕೃತ್ಯಗಳು ನಡೆಸುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿ ಆಗಿದ್ದ ಅವಧಿಯಲ್ಲೂ ಸಂವಿಧಾನವನ್ನು ಪರಾಮರ್ಶೆ ಮಾಡುವ ಯತ್ನಗಳು ನಡೆದವು. ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ದಿನದಿಂದಲೂ ಸಂವಿಧಾನವನ್ನು ಬುಡಮೇಲು ಮಾಡುವ ಕೃತ್ಯಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.
ನಂಜನಗೂಡು ಕ್ಷೇತ್ರದಿಂದ ಸ್ಪರ್ಧೆ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೇನೆ. ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕೂಡ ನಂಜನಗೂಡಿನಿಂದ ಕಣಕ್ಕಿಳಿಯಲು ಬಯಸಿದ್ದಾರೆ. ಆದರೆ, ಈ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ಸ್ಪರ್ಧಿಸಿದರೆ ಒಳಿತು. ಅವರು ಇಡೀ ರಾಜ್ಯ ಸುತ್ತಿ ಪ್ರಚಾರ ಕೈಗೊಳ್ಳಬೇಕಿದೆ. ಅವರು ವರುಣದಿಂದ ಸ್ಪರ್ಧಿಸಿದಾಗ ಗೆಲುವು ಸಾಧಿಸಿ ಮುಖ್ಯಮಂತ್ರಿ ಆದರು. ಮುಂದಿನ ಚುನಾವಣೆ ಅವರ ಕೊನೆಯ ಚುನಾವಣೆ ಆಗಿರುವುದರಿಂದ ವರುಣದಿಂದಲೇ ಸ್ಪರ್ಧಿಸಬೇಕು ಎಂದು ಸಲಹೆ ನೀಡಿದರು.
ಜನವರಿ ಮೊದಲ ವಾರದಿಂದ ಕಾಂಗ್ರೆಸ್ ನಾಯಕರು ಚುನಾವಣಾ ಪ್ರಚಾರ ಕಾರ್ಯ ನಡೆಸಲಿದ್ದು, ಆರಂಭದಲ್ಲಿ ಎಲ್ಲ ನಾಯಕರು ಒಟ್ಟಾಗಿ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ನಂತರದ ದಿನಗಳಲ್ಲಿ ವಿವಿಧ ತಂಡಗಳಾಗಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ವಲ್ಪ ಹಿನ್ನಡೆಯಾಗಲಿದೆ. ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದರು.