

ತೆಲಸಂಗ: ರಾಜ್ಯದಲ್ಲಿ ವಿಜಯಪುರ ನಂತರ ಅಥಣಿಯಲ್ಲಿಯೇ ಹೆಚ್ಚು ದ್ರಾಕ್ಷಿ ಬೆಳೆಯುತ್ತಿದ್ದು, ದೇಶದ ಆರ್ಥಿಕತೆಯ ಬೆನ್ನೆಲುಬು ಕೃಷಿ. ಆದರೆ, ಅಥಣಿಯ ಆರ್ಥಿಕತೆಯ ಬೆನ್ನೆಲುಬು ದ್ರಾಕ್ಷಿ ಬೆಳೆಗಾರರು ಎಂದು ತಾಲೂಕು ತೋಟಗಾರಿಕೆ ಅಧಿಕಾರಿ ಶ್ವೇತಾ ಹಾಡಕರ ಹೇಳಿದರು.
ಗ್ರಾಮದಲ್ಲಿ ದ್ರಾಕ್ಷಿ ಬೆಳೆಗಾರರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಒಂದು ದಿನದ ದ್ರಾಕ್ಷಿ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹವಾಮಾನ ವೈಪರೀತ್ಯದಿಂದ 2 ವರ್ಷದಿಂದ ದ್ರಾಕ್ಷಿ ಬೆಳೆಯಿಂದ ನಷ್ಟವಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಶಿಬಿರ ಹಮ್ಮಿಕೊಂಡಿರುವುದು ಉತ್ತಮ ವಿಷಯ ಎಂದರು.
ಮಣ್ಣು ವಿಜ್ಞಾನಿ ಡಾ. ಪ್ರಸನ್ನ ಎಸ್.ಎಂ.ಮಾತನಾಡಿ, ನಾಸಿಕ್ ಅಥವಾ ಅಮೆರಿಕದ ಕ್ಯಾಲಿೆರ್ನಿಯಾ ವ್ಯಾಲಿಗೆ ತುಲನೆ ಮಾಡುವಷ್ಟು ಫಲವತ್ತಾದ ಭೂಮಿ ನಿಮ್ಮದು. ಇದು ತೋಟಗಾರಿಕೆಗೆ ಹೇಳಿ ಮಾಡಿಸಿದ ಮಣ್ಣಾಗಿದೆ. ಮಣ್ಣಿನಲ್ಲಿ ಸಾವಯುವ ಇಂಗಾಲದ ಪ್ರಮಾಣ ಹೆಚ್ಚಿದ್ದರೆ ಯಾವುದೆ ಸಮಸ್ಯೆ ಬರುವುದಿಲ್ಲ ಎಂದು ತಿಳಿಸಿದರು.
ಡಾ.ಸಿದ್ದಪ್ಪ ಥೋಕೆ ಮಾತನಾಡಿದರು. ಗ್ರಾಪಂ ಅಧ್ಯಕ್ಷ ವಿಲಾಸ್ ಮೋರೆ, ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎಸ್.ಐ.ಅಥಣಿ, ತೋಟಗಾರಿಕಾ ಅಧಿಕಾರಿ ಅಕ್ಷಯಕುಮಾರ ಉಪಾಧ್ಯಾಯ, ಕೀಟ ಶಾಸ್ತ್ರ ಪ್ರಾಧ್ಯಾಪಕ ಡಾ.ವೆಂಕಟೇಶಲು, ಸಸ್ಯ ರೋಗ ಶಾಸ್ತ್ರ ಪ್ರಾಧ್ಯಾಪಕ ಡಾ.ಬಸವರಾಜಪ್ಪ ಎಂ.ಪಿ., ಅರ್ಥಶಾಸ ಪ್ರಾಧ್ಯಾಪಕ ಡಾ.ಶ್ರೀಪಾದ ವಿಶ್ವೇಶ್ವರ, ಹಣ್ಣು ವಿಭಾಗ ಪ್ರಾಧ್ಯಾಪಕ ಡಾ.ಆನಂದ ನಂಜಪ್ಪನವರ, ಡಾ.ಸಂಗನಬಸವ ಗೊಳ್ಳಗಿ, ಡಾ.ರಾಘವೇಂದ್ರ ಆಚಾರ್ಯ, ಅರವಿಂದ ಗೋಲವಾನೆ ಇತರರಿದ್ದರು.