ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ದೇಶ ಸಶಕ್ತ: ಫೈನಾನ್ಶಿಯಲ್ ಎಕ್ಸ್‌ಪರ್ಟ್ ಡಾ.ತೀರ್ಥಂಕರ್ ಪಟ್ನಾಯಿಕ್ ವಿಶ್ಲೇಷಣೆ

mysore
Published on

ಮೈಸೂರು: ಇಲೆಕ್ಟ್ರಾನಿಕ್ ಟ್ರೇಡಿಂಗ್ ಇಂದಿನ ಭಾರತದ ಆರ್ಥಿಕ ಮಾರುಕಟ್ಟೆಯ ಚಿತ್ರಣವನ್ನು ಬದಲಿಸಿದೆ ಎಂದು ಮುಂಬೈನ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಲಿಮಿಟೆಡ್‌ನ ಆರ್ಥಿಕ ತಜ್ಞ ಡಾ.ತೀರ್ಥಂಕರ್ ಪಟ್ನಾಯಿಕ್ ಹೇಳಿದರು.

ನಗರದ ಶ್ರೀ ಧರ್ಮಸ್ಥಳ ಇನ್ಸ್‌ಟಿಟ್ಯೂಟ್ ಫಾರ್ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್‌ನಲ್ಲಿ ‘ಕಾರ್ಪೋರೇಟ್ ಫೈನಾನ್ಸ್ ಮತ್ತು ಫೈನಾನ್ಶಿಯಲ್ ಮಾರ್ಕೆಟ್ ಕ್ಷೇತ್ರದಲ್ಲಾಗುತ್ತಿರುವ ಹೊಸ ಅಲೆಯ ಬದಲಾವಣೆ’ ಕುರಿತು ಆಯೋಜಿಸಿದ್ದ 13ನೇ ಅಂತಾರಾಷ್ಟ್ರೀಯ ಆರ್ಥಿಕ ವಿಚಾರಸಂಕಿರಣದಲ್ಲಿ ಮಾತನಾಡಿದರು.

ಭೌತಿಕ ಹಾಗೂ ಡಿಜಿಟಲ್ ಮೂಲಸೌಕರ್ಯಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಇದು ಮಾರುಕಟ್ಟೆಗೆ ಸಂಬಂಧಿಸಿದ ಚಟುವಟಿಕೆಗಳು ಮಹತ್ತರ ಹೆಚ್ಚಳ ಕಾಣುವಂತೆ ಮಾಡಿವೆ.

ಈ ಎಲ್ಲದರಿಂದಾಗಿ ಹೂಡಿಕೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಆರ್ಥಿಕ ಮಾರುಕಟ್ಟೆಯು ಸಂಪತ್ತನ್ನು ಹುಟ್ಟುಹಾಕುವ ಸ್ಥಳವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತದ ಅರ್ಥವ್ಯವಸ್ಥೆಯು ಗಣನೀಯ ಮಟ್ಟದ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಶಕ್ತವಾಗಿದೆ ಎಂದರು.

ಭಾರತವು ಯುವಶಕ್ತಿ ಪ್ರಧಾನವಾದ ದೇಶ. ಕೆಲಸ ಮಾಡುವ, ಅಪಾರ ಸಾಮರ್ಥ್ಯವಿರುವ ಗುಣಮಟ್ಟದ ಜನಶಕ್ತಿ ಬಳಸಿಕೊಂಡು ಭಾರತವು ಏನನ್ನೂ ಸಾಧಿಸಬಹುದಾದ ಸಮರ್ಥತೆ ಹೊಂದಿದೆ.

ಈ ಜನಶಕ್ತಿ ವೈವಿಧ್ಯಮಯ ಆರ್ಥಿಕತೆ, ರಾಜಕೀಯ ಭದ್ರತೆ ಮತ್ತು ಆಂತರಿಕವಾಗಿ ಬಹುವಿಸ್ತಾರವಾಗಿ ಹರಡಿಕೊಂಡಿರುವ ಆರ್ಥಿಕತೆಯಿಂದಾಗಿ ಭಾರತದ ಅರ್ಥವ್ಯವಸ್ಥೆಯು ಗಣನೀಯ ಮಟ್ಟದ ಸ್ಥಿರತೆ ಕಾಪಾಡಿಕೊಳ್ಳಲು ಶಕ್ತವಾಗಿದೆ ಎಂದರು

ಗ್ರೋಥ್ ಇನ್ವೆಸ್ಟರ್ಸ್ ಬಗ್ಗೆ ಮಾತನಾಡಿದ ಡಾ.ಪಟ್ನಾಯಿಕ್ ಅವರು, 1 ಕೋಟಿ ರೂ.ದಿಂದ ಆರಂಭವಾದ ಇದರ ಪಯಣ ಈಗ 12 ಕೋಟಿ ರೂ. ತಲುಪಿದ್ದು, ಒಂದು ವರ್ಷದೊಳಗಿನ ಅವಧಿಯಲ್ಲಿ ಹೂಡಿಕೆದಾರರ ಸಂಖ್ಯೆ ಒಂದು ಕೋಟಿಯಷ್ಟು ಹೆಚ್ಚಿದೆ. ಎಲ್ಲಕ್ಕಿಂತ ಮುಖ್ಯವಾಗಿ ಯುವ ಹೂಡಿಕೆದಾರರ ಸಂಖ್ಯೆ ಹೆಚ್ಚುತ್ತಿದ್ದು, 2024ರ ಪ್ರಕಾರ ಶೇ.40ರಷ್ಟು ಯುವ ಹೂಡಿಕೆದಾರರು ಬೇರೆ ಬೇರೆ ಕಡೆಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎಂದು ತಿಳಿಸಿದರು.

ಡಿಜಿಟಲ್ ಮತ್ತು ಹಣಪಾವತಿ ಕ್ಷೇತ್ರದಲ್ಲಾಗಿರುವ ಕ್ರಾಂತಿಕಾರಿ ಬದಲಾವಣೆಯು ಆರ್ಥಿಕ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳ ಸೃಷ್ಟಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.

ಸಂಸ್ಥೆಯ ನಿರ್ದೇಶಕ, ಲೆಫ್ಟಿನೆಂಟ್ ಕರ್ನಲ್ ಡಾ.ಎಸ್.ಎನ್. ಪ್ರಸಾದ್ ಮಾತನಾಡಿ, ಆರ್ಥಿಕ ಕ್ಷೇತ್ರದ ಕುರಿತು ಶಾಸ್ತ್ರಬದ್ಧ ಅಧ್ಯಯನ ನಡೆಸುವವರ ಸಂಖ್ಯೆ ಹೆಚ್ಚೇ ಇದ್ದರೂ ಅದರಲ್ಲಿ ಮಹತ್ವದ ಯಶಸ್ಸು ಕಾಣುವವರ ಸಂಖ್ಯೆ ಮಾತ್ರ ಕಡಿಮೆ ಇದೆ.

ಏಕೆಂದರೆ, ಆರ್ಥಿಕತೆಯ ಅಧ್ಯಯನವೆಂದರೆ ಅದು ಕಾರ್ಯವಿಧಾನ, ನಿರ್ವಹಣಾ ವಿಧಾನಗಳ ಬಗೆಗೆ ಕಲಿಯುವುದಾಗಿದೆ. ಯಾವ ಸಂಗತಿಯನ್ನು ಕಾರ್ಯರೂಪಕ್ಕೆ ತರಬೇಕು ಎಂಬುದನ್ನು ಕಲ್ಪಿಸಿಕೊಂಡು ಅದನ್ನು ನನಸಾಗಿಸಲು ಪರಿಶ್ರಮಪಡುವ ವ್ಯಕ್ತಿ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.

ಹಣ ಹೂಡಿಕೆಯ ಮೇಲೆ ಮನುಷ್ಯ ಸ್ವಭಾವದ ಪ್ರಭಾವವನ್ನು ವಿವರಿಸಿದ ಡಾ.ಪ್ರಸಾದ್, ಹಣ ಹೂಡಿಕೆಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವಲ್ಲಿ ಮನುಷ್ಯ ಸ್ವಭಾವದ ಪ್ರಭಾವ ದೊಡ್ಡದು.

ಆದರೆ ಕೆಲವು ಬಾರಿ ಹೆಚ್ಚೆಚ್ಚು ಮಾಹಿತಿಯು ಮನುಷ್ಯ ನಿರ್ಧಾರ ವಿಚಲಿತಗೊಳಿಸಬಹುದು ಎಂದರು. ಕಾನ್ಫರೆನ್ಸ್ ಚೇರ್ ಡಾ. ಎಂ.ಶ್ರೀರಾಮ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net