ಆರ್ಥಿಕ ಸಮಸ್ಯೆಗೆ ಹೈನುಗಾರಿಕೆ ಪರಿಹಾರ, ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ ಅಭಿಮತ ಬೆತ್ತನಗೆರೆಯಲ್ಲಿ ಸಂಘದ ಕಟ್ಟಡ ಉದ್ಘಾಟನೆ

23 Nela Ph 01 Dairy Udgatane
Published on

ನೆಲಮಂಗಲ: ಗ್ರಾಮಾಂತರ ಪ್ರದೇಶದಲ್ಲಿ ರೈತ ಕುಟುಂಬಗಳನ್ನು ಆರ್ಥಿಕ ಸಮಸ್ಯೆಗಳಿಂದ ಪಾರು ಮಾಡಲು ಹೈನುಗಾರಿಕೆ ಸಹಕಾರಿಯಾಗಿದೆ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದ (ಬಮುಲ್) ಅಧ್ಯಕ್ಷ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿಯ ಬೆತ್ತನಗೆರೆಯಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಕೊವೀಡ್-19 ಸಂಕಷ್ಟದ ಸಂದರ್ಭದಲ್ಲಿ ಅನೇಕ ಕಾರ್ಖಾನೆಗಳು ಮುಚ್ಚಿವೆ. ನಗರದ ಜನರು ಗ್ರಾಮೀಣ ಭಾಗದಲ್ಲಿ ನೆಲೆಸಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕೈಗಾರಿಕೆಗಳಲ್ಲಿ ದೊರೆಯುವ ವೇತನಕ್ಕಿಂತ ದುಪ್ಪಟ್ಟು ಹಣವನ್ನು ಹೈನುಗಾರಿಕೆಯಲ್ಲಿ ಸಂಪಾದಿಸುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಹಳ್ಳಿಗಳಲ್ಲೇ ಹೈನುಗಾರಿಕೆ ಆರಂಭಿಸಿದರೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು. ಸಹಕಾರ ಸಂಘವೂ ಅಭಿವೃದ್ಧಿ ಹೊಂದುತ್ತದೆ ಎಂದರು.

ಬಮುಲ್ ನಿರ್ದೇಶಕ ಕೆ.ಎಸ್. ಕೇಶವಮೂರ್ತಿ ಮಾತನಾಡಿ, ಸಂಘದ ಕಟ್ಟಡವನ್ನು ದೇವಾಲಯವೆಂದು ಭಾವಿಸಿ ಗುಣಮಟ್ಟದ ಹಾಲು ಉತ್ಪಾದನೆ ಮಾಡಿದಲ್ಲಿ ಅಧಿಕ ಲಾಭಗಳಿಕೆ ಜತೆಗೆ ಅಲ್ಲದೆ ಉತ್ತಮ ಆರೋಗ್ಯವಂತ ಸಮಾಜ ನಿರ್ಮಿಸಬಹುದು. ಇದು ಸೇರಿ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ರೈತರು ಗುಣಮಟ್ಟದ ಹಾಲು ಉತ್ಪಾದಿಸಿ ತಾಲೂಕಿಗೆ ಕೀರ್ತಿ ತರಬೇಕು ಎಂದು ಹೇಳಿದರು.

100 ಲೀಟರ್‌ನಿಂದ ಪ್ರಾರಂಭವಾದ ಸಂಘ ಇಂದು ಸಾವಿರ ಲೀಟರ್‌ಗೂ ಹೆಚ್ಚು ಹಾಲು ಶೇಖರಣೆ ಮಾಡಿ ಅಧಿಕ ಲಾಭಗಳಿಸುತ್ತಿದೆ. ಸಹಕಾರ ಸಂಘ ಸಂಸ್ಥೆಯ ಕಟ್ಟಡನಿಧಿ, ಆಪತ್ಭಾಂದವ ನಿಧಿಯ ಜತೆಗೆ ಬಮುಲ್ ಟ್ರಸ್ಟ್, ಕೆಎಂಎಫ್ ಹಾಗೂ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದ ಸಹಕಾರದಿಂದ ಅಂದಾಜು 16 ಲಕ್ಷ ರೂ. ವೆಚ್ಚದಲ್ಲಿ ಉತ್ತಮ ಕಟ್ಟಡ ನಿರ್ಮಿಸಲಾಗಿದೆ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ಮಹೇಶ್ ತಿಳಿಸಿದರು.

ಬಮುಲ್ ವ್ಯವಸ್ಥಾಪಕ ಎ. ರಂಗಸ್ವಾಮಿ, ಇ. ರವಿಕುಮಾರ್, ಎನ್. ಕೃಷ್ಣಮೂರ್ತಿ, ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಉಪಾಧ್ಯಕ್ಷೆ ಬೈಲಮ್ಮ, ನಿರ್ದೇಶಕರಾದ ಹನುಮಂತರಾಜು, ಸಿದ್ದರಾಜು, ಬಿ. ಕಾಂತರಾಜು, ಬೈಲಪ್ಪ, ನಾಗರಾಜು, ನಾರಾಯಣ್, ಉಮೇಶ್, ಬಿ. ಬಸಪ್ಪ, ಅನಿತಾ, ಮುಖ್ಯಕಾರ್ಯನಿರ್ವಾಹಕ ಎಂ. ಸಿದ್ಧಾರ್ಥ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net