ಆರ್ಥಿಕ ಸದೃಢತೆಯತ್ತ ಭಾರತ

h3-Deshpande Foundation 1
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ವಿಶ್ವದ ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೂ ಭಾರತವು ಆರ್ಥಿಕ ಸದೃಢತೆ ಸಾಧಿಸುತ್ತಿದೆ. ಉದ್ಯಮ ರಂಗ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ ಎಂದು ದೇಶಪಾಂಡೆ ಫೌಂಡೇಷನ್ ಸಂಸ್ಥಾಪಕ ಡಾ. ಗುರುರಾಜ ದೇಶಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಗೋಕುಲ ರಸ್ತೆಯ ದೇಶಪಾಂಡೆ ಸ್ಟಾರ್ಟಪ್ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಸ್ಟಾರ್ಟಪ್ ಗ್ರಾವಿಟಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಟಾರ್ಟಪ್ ಯುಗ ಆರಂಭವಾಗಿದೆ. ಬಹಳಷ್ಟು ನವೋದ್ಯಮಿಗಳು ಮುಂದೆ ಬರುತ್ತಿದ್ದಾರೆ. ನಿಗದಿತ ಗುರಿ ಮುಟ್ಟಲು ಅನೇಕ ಸವಾಲುಗಳು ಎದುರಾಗುತ್ತವೆ. ಯಾವುದಕ್ಕೂ ಎದೆಗುಂದದೆ ಮುನ್ನಡೆಯಬೇಕು. ಇದರಿಂದ ನಿಮ್ಮ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದರು.

ಭಾರತವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿರುವ ಯುವ ಉದ್ಯಮಿಗಳಿಗೆ ಪ್ರೋತ್ಸಾಹದ ಅಗತ್ಯವಿದೆ. ಈ ನಿಟ್ಟಿನಲ್ಲಿ ದೇಶಪಾಂಡೆ ಫೌಂಡೇಷನ್ ಕಾರ್ಯಪ್ರವೃತ್ತವಾಗಿದೆ ಎಂದು ವಿವರಿಸಿದರು.

ಸಹ ಸಂಸ್ಥಾಪಕ ಜಯಶ್ರೀ ದೇಶಪಾಂಡೆ, ದೇಶಪಾಂಡೆ ಸ್ಪಾರ್ಟಪ್ ಸಿಇಒ ಅರವಿಂದ ಚಿಂಚೂರೆ ಇದ್ದರು.

ಗ್ರಾಮೀಣರ ಬದಕು ಹಸನಕ್ಕೆ ಮುಂದು

ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಗ್ರಾಮೀಣರ ಬದುಕು ಹಸನುಗೊಳಿಸುವುದು, ಆರ್ಥಿಕ ಭದ್ರತೆ ನೀಡುವುದು... ಇವೆಲ್ಲ ಉದ್ದೇಶಗಳನ್ನಿಟ್ಟುಕೊಂಡು ‘ಸುಸ್ಥಿರ ಕೃಷಿ ಮತ್ತು ಆಹಾರ ಮೌಲ್ಯದ ಸರಪಳಿ’ಯನ್ನು ಯೋಜಿಸಲಾಗಿದೆ. ಇದು ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಅನುಷ್ಠಾನ ಯೋಜನೆಯಾಗಿದೆ ಎಂದು ದೇಶಪಾಂಡೆ ಫೌಂಡೇಷನ್ ಸಂಸ್ಥಾಪಕ ಡಾ. ಗುರುರಾಜ ದೇಶಪಾಂಡೆ, ದೇಶಪಾಂಡೆ ಸ್ಟಾರ್ಟಪ್ ಸಿಇಒ ಅರವಿಂದ ಚಿಂಚೂರೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಆರ್ಥಿಕ, ಸಾಮಾಜಿಕ, ಪರಿಸರಕ್ಕೆ ಪೂರಕವಾದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಈಗ ಸದ್ಯ ಗ್ರಾಮೀಣ ಭಾಗದಲ್ಲಿ ಬೆಳೆಯುವ ಬಾಳೆಹಣ್ಣು ಮತ್ತು ಶುಂಠಿಯ ಉತ್ಪನ್ನಗಳನ್ನು ಪ್ರಚುರಪಡಿಸಲಾಗುವುದು. ಮುಂದಿನ ದಿನಗಳಲ್ಲಿ ಹೊಸ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ರೈತರು ಮಳೆಯನ್ನೇ ನೆಚ್ಚಿ ಬೆಳೆ ಬೆಳೆಯುತ್ತಾರೆ. ಅವರಿಗೆ ಭದ್ರತೆ ಇರುವುದಿಲ್ಲ. ಭದ್ರತೆ ಕೊಡುವ ಉದ್ದೇಶದಿಂದ ನಮ್ಮ ಫೌಂಡೇಷನ್ ಮಹತ್ವದ ಯೋಜನೆಗಳನ್ನು ರೂಪಿಸುತ್ತಿದೆ. ಕೆಲವು ಕಂಪನಿಗಳ ಜತೆಗೆ ಒಡಂಬಡಿಕೆ ಮಾಡಿಕೊಂಡು ಆಹಾರೋತ್ಪನ್ನಗಳ ಸಂಸ್ಕರಣೆ, ಸಂಗ್ರಹ ಮತ್ತು ಮಾರುಕಟ್ಟೆಗೆ ಕೊಂಡೊಯ್ಯುವ ಕೆಲಸ ಮಾಡಲಾಗುವುದು ಎಂದರು.

ಸಂಕಷ್ಟದ ಜತೆಗೆ ಸೆಣೆಸುವ ಛಲವಿರಲಿ

ಹೊಸ ಉದ್ಯಮ ಆರಂಭಿಸಿದಾಗ ಹಲವಾರು ಸಂಕಷ್ಟಗಳು ಎದುರಾಗುತ್ತವೆ. ಅವೆಲ್ಲವುಗಳನ್ನು ಮೆಟ್ಟಿ ನಿಲ್ಲುವ, ಸೆಣೆಸುವ ಛಲವನ್ನು ಬೆಳೆಸಿಕೊಳ್ಳಬೇಕೆಂಬ ಅಭಿಪ್ರಾಯ ನವೋದ್ಯಮಿಗಳಿಂದ ಸಂವಾದದಲ್ಲಿ ವ್ಯಕ್ತವಾಯಿತು.

ನವೋದ್ಯಮಿಗಳಾದ ತನ್ವೀರ್ ಅಹ್ಮದ್, ಡಾ. ಜಯಂತ ಖಂಡಾರೆ, ನವಜೀತ್ ಕರ್ಕೆರಾ, ಅಂಕುಶ ಕೊರವಿ ತಮ್ಮ ಕ್ಷೇತ್ರದಲ್ಲಿ ಮಾಡಿದ ಸಾಹಸವನ್ನು ವಿವರಿಸಿದರು. ಹೊಸ ಐಡಿಯಾಗಳನ್ನು ಪ್ರಯೋಗಾತ್ಮಕವಾಗಿ ಇಳಿಸಿದ್ದೇವೆ. ಸಾಧಿಸುವ ಛಲ ಇದ್ದರೆ, ಎಲ್ಲವೂ ತಾನಾಗಿಯೇ ಒಲಿದು ಬರಲಿದೆ. ಹೆದರಿ ದೂರ ಸರಿಯಬಾರದು ಎಂಬ ಸಲಹೆ ನೀಡಿದರು. ಸುಹಾಸ ಮೋತವಾನಿ ನಿರ್ವಹಿಸಿದರು.

ನಮ್ಮ ಯೋಧರಲ್ಲಿ ಆಧುನಿಕ ಶಸ್ತ್ರಾಸ್ತಗಳಿಲ್ಲ ಎಂಬ ಕೊರಗು ಇತ್ತು. ಇದನ್ನು ಗಮನದಲ್ಲಿಟ್ಟುಕೊಂಡು ರೈಫಲ್ ಉತ್ಪಾದಿಸುವ ಐಡಿಯಾ ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ಹೊಳೆದಿತ್ತು. ಅದನ್ನು ಸಕಾರಗೊಳಿಸಿದ್ದೇನೆ. ನಮ್ಮ ಯೋಧರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದರೆ, ದೇಶ ಹಾಗೂ ನಾವೂ ಸುರಕ್ಷಿತ.

-ಅಂಕುಶ ಕೊರವಿ, ನವೋದ್ಯಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net