

ಚಿತ್ರದುರ್ಗ: ಆರ್ಥಿಕ ಬಲ ತುಂಬದ ಹೊರತು ರಂಗ ಕಲೆಗಳು ಬಹಳ ಕಾಲ ಉಳಿಯದು ಎಂದು ರಂಗಾಯಣ ನಿರ್ದೇಶಕ ಮೈಸೂರಿನ ಸತೀಶ ತಿಪಟೂರು ಸಲಹೆ ನೀಡಿದರು.
ಸರ್ಕಾರಿ ಕಲಾ ಕಾಲೇಜಿನಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ, ಕಾಲೇಜಿನಿಂದ ಹಮ್ಮಿಕೊಂಡಿರುವ ಚಿತ್ರದುರ್ಗ ಪರಿಸರದ ಬಯಲಾಟಗಳು ಎರಡು ದಿನದ ವಿಚಾರ ಸಂಕಿರಣವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ದೊಡ್ಡಾಟ, ಬಯಲಾಟ, ಇನ್ನಿತರೆ ರಂಗ ಪ್ರಾಕಾರಗಳು ಜನಪದರ ಬದುಕಿನ ಒಂದು ಭಾಗ. ಅಳಿವಿನಂಚಿನಲ್ಲಿರುವ ಕಲೆಗಳನ್ನು ಉಳಿಸಿ ಬೆಳೆಸಬೇಕಾಗಿದ್ದು, ಪುನಶ್ಚೇತನಕ್ಕೆ ಕೈಜೋಡಿಸಬೇಕಿದೆ. ಆರ್ಥಿಕ ಲಾಭಕ್ಕಾಗಿ ಮೇಲ್ವರ್ಗದವರು ಹೈಜಾಕ್ ಮಾಡುವುದರ ವಿರುದ್ಧವೂ ಕಲಾವಿದರು ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ, ಸಾಂಸ್ಕೃತಿಕ ನುಸುಳುಕೋರರಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು.
ಒಂದು ವರ್ಷದ ರಂಗಕಲೆ ಡಿಪ್ಲೊಮಾ ಕೋರ್ಸ್ ಅನ್ನು ಎರಡು ವರ್ಷಗಳಿಗೆ ವಿಸ್ತರಿಸಿ ದಕ್ಷಿಣ ಭಾರತಕ್ಕೆ ವ್ಯಾಪಿಸಬೇಕು. ಬಯಲಾಟ ಕಾರ್ಯಾಗಾರವಾಗಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್. ದುರ್ಗಾದಾಸ್ ಮಾತನಾಡಿ, ರಂಗಭೂಮಿಯನ್ನು ಕಟ್ಟಿದವರು ಅನಕ್ಷರಸ್ಥರು, ರೈತರು, ಕೂಲಿಕಾರರು. ಶ್ರಮಿಕ ವರ್ಗದಿಂದ ಮಾತ್ರ ಬಯಲಾಟ ಉಳಿದಿದೆ. ಯುವಸಮೂಹ ಪಾರಂಪರಿಕ ಕಲೆಗಳ ಕುರಿತು ತಿಳಿದುಕೊಂಡು ಉಳಿಸಬೇಕಿದೆ ಎಂದು ಮನವಿ ಮಾಡಿದರು.
ರಂಗ ಸಮಾಜ ಸದಸ್ಯ ಡಾ. ರಾಜಪ್ಪ ದಳವಾಯಿ ಮಾತನಾಡಿ, ರಂಗ ಶಿಕ್ಷಣ ವ್ಯಾಪಕವಾಗಿ ಕರ್ನಾಟಕದಲ್ಲಿ ಬೆಳೆದಿದೆ. ಬಯಲಾಟ ದೊಡ್ಡ ಕಲಾ ಮಾಧ್ಯಮ. ಇದರಲ್ಲಿ ಜಾತ್ಯತೀತ ನೆಲೆಗಟ್ಟು, ಮಾನವೀಯ ಮೌಲ್ಯಗಳಿವೆ. ಅದಕ್ಕಾಗಿ ಉಳಿಸಬೇಕಿದೆ ಎಂದರು.
ಬಯಲಾಟದ ಪಲ್ಲವಿತ ಪ್ರದೇಶ ಚಿತ್ರದುರ್ಗ ಆಗಿದ್ದು, ಹೊಸ ಪ್ರಯೋಗವಾಗದಿದ್ದರೆ, ಬಯಲಾಟ ಉಳಿಯದು ಎಂದು ಎಚ್ಚರಿಸಿದರು.
ಬುಡಕಟ್ಟು ಅಧ್ಯಯನ ವಿಭಾಗ ಹಂಪಿ ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕಿ ಡಾ.ಕೆ.ಎಂ. ಮೈತ್ರಿ ಮಾತನಾಡಿ, ಬಯಲಾಟದ ವೇಷಭೂಷಣ ಆಕರ್ಷಣೀಯ ಕಾರಣಕ್ಕೆ ಸಮುದಾಯದ ಮೇಲೆ ಪ್ರಭಾವ ಬೀರಲಿದೆ. ಹಬ್ಬಗಳು, ಕಲೆಗಳ ಹಿಂದೆ ಜ್ಞಾನ ವಿಜ್ಞಾನವಿದೆ. ಅವುಗಳ ಉಳಿವಿಗೆ ಸರ್ಕಾರ ಗಮನ ಹರಿಸಬೇಕು ಎಂದು ಕೋರಿದರು.
ದುರ್ಗದ ಇತಿಹಾಸ ಸುಧೀರ್ಘವಾದುದು: ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ಚಿತ್ರದುರ್ಗದ ಇತಿಹಾಸ ಸುಧೀರ್ಘವಾದುದು. ವೈವಿಧ್ಯಮಯ ಹೆಸರುಗಳನ್ನು ಬಳಸಲಾಗಿದೆ. ಚಿತ್ರಕಲ್ ದುರ್ಗ, ಹಿಡಿಂಬಿ ಪಟ್ಟಣ, ಬೂತನಾಥನ ದುರ್ಗವೆಂದು ಈ ಹಿಂದೆ ಕರೆಯಲಾಗುತ್ತಿತ್ತು ಎಂದು ಹೇಳಿದರು. ಭೌಗೋಳಿಕತೆ ಪ್ರಭಾವದಿಂದ ಅನೇಕ ಹೆಸರು ಚಿತ್ರದುರ್ಗಕ್ಕಿದೆ. ದುರ್ಗದ ಕೋಟೆಯನ್ನು ಬಲಿಷ್ಟಗೊಳಿಸಿದವರು ಪಾಳೆಯಗಾರರು ಎಂದು ವಿವರಿಸಿದರು.
ಸರ್ಕಾರಿ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಕರಿಯಪ್ಪ ಮಾಳಿಗೆ ಮಾತನಾಡಿ, ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಕಲಾವಿದರಿದ್ದಾರೆ. ಆದರೆ, ಸಮಕಾಲೀನ ಸಂದರ್ಭ ವ್ಯವಹಾರಿಕ ಬದುಕನ್ನೆ ಮುಖ್ಯ ಎಂದು ಭಾವಿಸಿದೆ. ಇದರ ನಡುವೆಯೂ ನೆಲ, ಜಲ, ಕಲೆಯನ್ನು ನಂಬಿ ಜೀವಿಸುತ್ತಿರುವ ಅಪರೂಪದ ಕಲಾವಿದರಿಗೆ ಗೌರವ ನೀಡುವುದನ್ನು ಕಲಿಯಬೇಕಿದೆ ಎಂದು ಕಿವಿಮಾತು ಹೇಳಿದರು.
ಜಿಲ್ಲೆಯ ಜಾನಪದ ಕುರಿತು ಡಾ. ಮೀರಾಸಾಬಿಹಳ್ಳಿ ಶಿವಣ್ಣ, ಬಯಲಾಟ ಪರಂಪರೆ ಬಗ್ಗೆ ಡಾ.ಬಿ.ಎಂ. ಗುರುನಾಥ ಮಾತನಾಡಿದರು. ಎನ್‌ಸಿಸಿ ಅಧಿಕಾರಿಗಳಾದ ಪ್ರೊ. ಮಂಜುನಾಥ, ಡಾ.ವಿ. ಪ್ರಸಾದ, ಡಾ.ಬಿ.ಕೆ. ಬಸವರಾಜು, ವ್ಯವಹಾರ ನಿರ್ವಹಣಾಶಾಸ್ತ್ರ ಮುಖ್ಯಸ್ಥೆ ಡಾ. ಮೇಘನಾ, ವಾಣಿಜ್ಯಶಾಸ್ತ್ರ ಮುಖ್ಯಸ್ಥೆ ಪ್ರೊ. ಜಮುನಾರಾಣಿ ಇದ್ದರು.