ಆರ್ಥಿಕ ಪ್ರಗತಿಗೆ ಪರಿಸರ ಸಂರಕ್ಷಣೆಯೂ ಮುಖ್ಯ: ಸಂಸದ ಯದುವೀರ್

mysore
Published on

ಮೈಸೂರು: ಭಾರತ ಸೂಪರ್ ಪವರ್ ರಾಷ್ಟ್ರವಾಗಲು ಮತ್ತು ಆರ್ಥಿಕತೆಯಲ್ಲಿ ಪ್ರಗತಿ ಸಾಧಿಸಲು ಪರಿಸರ ಸಂರಕ್ಷಣೆಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ನಗರದ ಸಿಎಫ್‌ಟಿಆರ್‌ಐನಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಉತ್ತಮವಾಗಿದ್ದರೆ ದೇಶ-ನಾಡು ಕೂಡ ಉತ್ತಮವಾಗಿರುತ್ತದೆ.

ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ಜವಾಬ್ದಾರಿ ತಿಳಿದುಕೊಂಡು ಪರಿಸರ ಸಂರಕ್ಷಿಸಬೇಕು. ಈ ಮೂಲಕ ಭಾರತವನ್ನು ಸುಸ್ಥಿರ ಅಭಿವೃದ್ಧಿ ರಾಷ್ಟ್ರವಾಗಿ ರೂಪಿಸಲು ಎಲ್ಲರೂ ಸಹಕಾರ ನೀಡಬೇಕು. ಪರಿಸರ ಸಂರಕ್ಷಣೆ ಕುರಿತು ವೇದಗಳಲ್ಲಿ ಸಾಕಷ್ಟು ಮಾಹಿತಿ ಇದೆ. ಪರಿಸರ ಸಂರಕ್ಷಿಸಿದರೆ ಯಾವ ರೀತಿ ಅನುಕೂಲವಾಗಲಿದೆ ಎಂಬುದನ್ನು ತಿಳಿಸಲಾಗಿದೆ. ಇವುಗಳಿಂದ ಸ್ಫೂರ್ತಿ ಪಡೆದು ನಾವು ಮುಂದುವರಿಯಬೇಕು ಎಂದರು.

ಕೇಂದ್ರ ಸರ್ಕಾರ ಸಹ ಪರಿಸರ ಸಂರಕ್ಷಣೆಗಾಗಿ ಅನೇಕ ಕಾರ್ಯಕ್ರಮ ಜಾರಿ ಮಾಡಿದೆ. ತಾಯಿ ಹೆಸರಲ್ಲಿ ಒಂದು ಸಸಿ ಎನ್ನುವ ಅಭಿಯಾನದ ಮೂಲಕ ಎಲ್ಲರೂ ಗಿಡ ನೆಡುವ ಕಾರ್ಯದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತಿದೆ. ಜಲಜೀವನ್ ಮಿಷನ್ ಮೂಲಕ ಪ್ರತಿ ಮನೆಗೂ ಶುದ್ಧ ನೀರನ್ನು ಕೊಡುವುದರ ಮೂಲಕ ಸ್ವಚ್ಛ ಪರಿಸರಕ್ಕೆ ಒತ್ತು ನೀಡಲಾಗಿದೆ. ಸಣ್ಣ-ಸಣ್ಣ ಹಾಡಿಗಳಲ್ಲೂ ಸ್ವಚ್ಛತೆ ಹಾಗೂ ಶುದ್ಧತೆಗೆ ಆದ್ಯತೆ ಕೊಡಲಾಗಿದೆ. ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಸ್ಥಿರ ಅಭಿವೃದ್ಧಿಗೆ ಗಮನ ನೀಡಲಾಗಿದೆ ಎಂದು ಹೇಳಿದರು.

ಮೈಸೂರು ನಗರ ಹಲವು ಬಾರಿ ಸ್ವಚ್ಛ ನಗರಿ ಎನ್ನುವ ಹಿರಿಮೆ ಪಡೆದಿತ್ತು. ಈಗ ಕೆಲವು ವರ್ಷಗಳಿಂದ ಅದು ಕೈ ತಪ್ಪಿದೆ. ಮತ್ತೆ ಮೈಸೂರಿಗೆ ಈ ಪ್ರಶಸ್ತಿ ಬರಲು ಎಲ್ಲರೂ ಕೈಜೋಡಿಸಬೇಕು. ಸ್ವಚ್ಛ ನಗರಿ ಪ್ರಶಸ್ತಿಗೆ ಅನೇಕ ಮಾನದಂಡಗಳಿವೆ.

ಮೈಸೂರಿನಲ್ಲಿ ಸ್ವಚ್ಛತೆಗೆ ಹಿಂದಿನಿಂದಲೂ ಒತ್ತು ನೀಡಿದ್ದು, ಆದರೀಗ ಕಾಮಗಾರಿಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಅವುಗಳ ತ್ಯಾಜ್ಯ ಸಾಗಾಟ ಕಷ್ಟಕರವಾಗಿದೆ. ಜತೆಗೆ, ಮೈಸೂರು ಸುತ್ತಮುತ್ತ ಬಡಾವಣೆಗಳು ಬೆಳೆದಿವೆ. ಅವುಗಳ ಪ್ರಮಾಣಕ್ಕೆ ಅನುಗುಣವಾಗಿ ಕಸ ಸಂಗ್ರಹಣೆ, ವಿಲೇವಾರಿ, ಸಂಸ್ಕರಣೆ ಮಾಡಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇವುಗಳನ್ನು ಬಲವರ್ಧನೆಗೊಳಿಸಬೇಕಿದೆ ಎಂದರು.

ಸಿಎಫ್‌ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್, ಮಾಜಿ ಎಂಎಲ್‌ಎ ಎಲ್.ನಾಗೇಂದ್ರ, ಸಿಎಫ್‌ಟಿಆರ್‌ನ ವಿಜ್ಞಾನಿಗಳು ಭಾಗವಹಿಸಿದ್ದರು. ಅಮೃತ ವನ ನಿರ್ಮಾಣಕ್ಕೆ ಚಾಲನೆ

ವಿಶ್ವ ಪರಿಸರ ದಿನದ ಅಂಗವಾಗಿ ನಗರದ ಸಿಎಫ್‌ಟಿಆರ್‌ಐ ಆವರಣದಲ್ಲಿ ಅಮೃತ ವನ ನಿರ್ಮಾಣಕ್ಕೆ ಸಂಸದ ಯದುವೀರ್ ಚಾಲನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ‘ಏಕ್ ಪೇಡ್ ಮಾ ಕೆ ನಾಮ್’ (ಅಮ್ಮನ ಹೆಸರಿನಲ್ಲಿ ಒಂದು ಮರ) ಅಭಿಯಾನಕ್ಕೆ ಪೂರಕವಾಗಿ ಈ ಕಾರ್ಯಕ್ರಮ ನಡೆಯಿತು. ಸಿಎಸ್‌ಐಆರ್, ಸಿಎಫ್‌ಟಿಆರ್‌ಐನ 75ನೇ ಸಂಸ್ಥಾಪನಾ ದಿನದ ಸ್ಮರಣಾರ್ಥ, 75 ವಿಶಿಷ್ಟ ಸಸ್ಯಗಳನ್ನು ನೆಡುವ ಮೂಲಕ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ವಸ್ತುಪ್ರದರ್ಶನ

ದಿ ಇಕೋ ಫ್ಯಾಕ್ಟರಿ ಫೌಂಡೇಷನ್ ಸಹಯೋಗದಲ್ಲಿ ವಸ್ತುಪ್ರದರ್ಶನಕ್ಕೂ ಚಾಲನೆ ನೀಡಲಾಯಿತು. ತ್ಯಾಜ್ಯವನ್ನು ಮರು ಬಳಕೆ ಮಾಡಿಕೊಂಡು ತಯಾರು ಮಾಡಿರುವ ವಸ್ತುಗಳನ್ನು ಇಲ್ಲಿಡಲಾಗಿದೆ. ಸಿಎಫ್‌ಟಿಆರ್‌ನ ಹಾಸ್ಟೆಲ್ ಕಟ್ಟಡದ ಐಎಫ್‌ಟಿಟಿಸಿ ಸಭಾಂಗಣದಲ್ಲಿ ಏರ್ಪಡಿಸಿರುವ ಈ ಪ್ರದರ್ಶನವು ಜೂ.8ರವರೆಗೂ ಇರಲಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಭೇಟಿ ನೀಡಬಹುದು. ಸಾರ್ವಜನಿಕರಿಗೆ ಜೂ.7 ಮತ್ತು 8ರಂದು ಮುಕ್ತ ಪ್ರವೇಶ ಇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net