

ತ್ಯಾಗರ್ತಿ: ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಕೇಂದ್ರ ಸರ್ಕಾರದ ಜನಸುರಕ್ಷಾ ಯೋಜನೆ ತುರ್ತು ಅಪಘಾತದ ಸಂದರ್ಭದಲ್ಲಿ ನೆರವಿಗೆ ಬರುತ್ತದೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಸುಜಯ್ ಹೇಳಿದರು.
ಗ್ರಾಪಂ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಜನ ಸುರಕ್ಷಾ ಅಭಿಯಾನದಲ್ಲಿ ಮಾತನಾಡಿ, ಗ್ರಾಹಕರ ಸಾಮಾಜಿಕ ಭದ್ರತೆ ದೃಷ್ಟಿಯಿಂದ ಪ್ರತಿಯೊಬ್ಬ ಬ್ಯಾಂಕ್ ಖಾತೆದಾರರಿಗೆ ಯೋಜನೆ ಮಾಹಿತಿ ನೀಡಲಾಗುತ್ತಿದೆ. ವಾರ್ಷಿಕವಾಗಿ ಕಡಿಮೆ ಪ್ರೀಮಿಯಂ ತುಂಬಿದರೂ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ನೆರವು ಸಿಗಲಿದೆ ಎಂದು ತಿಳಿಸಿದರು.
18ರಿಂದ 70 ವರ್ಷದೊಳಗಿನ ಎಲ್ಲ ಬ್ಯಾಂಕ್ ಗ್ರಾಹಕರಿಗೆ ಅಪಘಾತದಿಂದ ಮರಣ ಸಂಭವಿಸಿದರೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಿಂದ ಮೃತರ ಕುಟುಂಬಕ್ಕೆ ಎರಡು ಲಕ್ಷ ರೂ. ವಿಮೆ ಹಣ ದೊರೆಯುತ್ತದೆ. ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಲ್ಲಿ ಐವತ್ತು ವರ್ಷಗಳ ಒಳಗೆ ನೋಂದಣಿ ಮಾಡಿಕೊಂಡವರು 55 ವರ್ಷದೊಳಗೆ ಮೃತಪಟ್ಟರೆ ಎರಡು ಲಕ್ಷ ರೂ. ಕುಟುಂಬಕ್ಕೆ ಸಿಗಲಿದೆ ಎಂದರು.
ಅಟಲ್ ಪೆನ್ಷನ್ ಯೋಜನೆಯಲ್ಲಿ ಹದಿನೆಂಟು ವರ್ಷದಿಂದ ನಲವತ್ತು ವರ್ಷಗಳ ಒಳಗೆ ನೋಂದಣಿ ಮಾಡಿಕೊಂಡರೆ 60 ವರ್ಷದ ನಂತರ ಪಿಂಚಣಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಗ್ರಾಹಕರ ಕುಂದುಕೊರತೆಗಳ ಬಗ್ಗೆ ಗ್ರಾಪಂ ಸದಸ್ಯರು ಬ್ಯಾಂಕ್ ಅಕಾರಿಗಳ ಜತೆ ಸಂವಾದ ನಡೆಸಿದರು. ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಲೋಕಪ್ಪ, ಉಪಾಧ್ಯಕ್ಷೆ ರೇಣುಕಾ ಸುರೇಶ್, ಸದಸ್ಯರಾದ ಇಸಾಕ್, ಹನುಮಂತ, ಎಚ್.ಗಿರೀಶ್, ಪಿಡಿಒ ರಾಜು, ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಜೈಕುಮಾರ್, ನಿರ್ದೇಶಕ ಲೋಕಪ್ಪ, ಪಿಡಿಒ ರಾಜು, ಕಾರ್ಯದರ್ಶಿ ರಿತೇಶ್, ಕೆಜಿಬಿ ಶಾಖಾ ಸಹಾಯಕ ವ್ಯವಸ್ಥಾಪಕ ಮನೋಜ್ ಕುಮಾರ್ ಇತರರಿದ್ದರು.