ಆರ್ಥಿಕ ಕ್ರಾಂತಿಯ ಲಾಭ ಪಡೆಯಿರಿ

CTD DHARAMATALA-....
Published on

ಚಿತ್ರದುರ್ಗ: ದೇಶದಲ್ಲಿ ಆಗುತ್ತಿರುವ ಆರ್ಥಿಕ ಕ್ರಾಂತಿಯ ಲಾಭವನ್ನು ಪಡೆಯಲು ಮಹಿಳೆಯರು ಮುಂದಾಗಬೇಕೆಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿದರು.
ನಗರದ ತಿರುಮಲ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ ತಾಲೂಕು ಮಟ್ಟದ ಯೋಜನೆ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ, ಮಾತನಾಡಿದರು.
ಒಂದು ಕಾಲದಲ್ಲಿ ಅಡುಗೆ ಮನೆಗೆ ಸೀಮಿತಳಾಗಿದ್ದ ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾಳೆ. ಇದರಿಂದಾಗಿ ಸಮಾಜದಲ್ಲಿ ಸಾಕಷ್ಟು ಪರಿವರ್ತನೆಯಾಗುತ್ತಿದೆ. ಮಹಿಳೆ ಆರ್ಥಿಕ ಸ್ವಾವಲಂಬಿಯಾದರೆ ಕುಟುಂಬ ಸದೃಢವಾಗಿರುತ್ತದೆ ಎಂದರು.
ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಕೆ.ಆರ್. ಮಂಜುನಾಥ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣಕ್ಕಾಗಿ ಅನೇಕ ಕಾರ‌್ಯಕ್ರಮ ಜಾರಿಗೊಳಿಸಿದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿರುವುದನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಧರ್ಮಾಧಿಕಾರಿ ಶ್ರೀ ಡಿ.ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅಂಥವರಿಗೆ ತಕ್ಕ ಪಾಠ ಕಲಿಸಬೇಕಾ ಗುತ್ತದೆ ಎಂದರು.
ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡಿ, ಅಪಪ್ರಚಾರದಲ್ಲಿ ನಿರತರಾಗಿರುವ ಕಿಡಿಗೇಡಿಗಳ ಕೃತ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಯೋಜನಾಧಿಕಾರಿ ಬಿ. ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾಂಕ್ ಆಫ್ ಬರೋಡಾ ಚಿತ್ರದುರ್ಗ ಶಾಖೆ ಸಹಾಯಕ ವ್ಯವಸ್ಥಾಪಕಿ ಮಧುಶ್ರೀ, ಸುಬ್ಬಾರೆಡ್ಡಿ, ಸುರೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net