

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಮೆರಿಕಾ ದೇಶದಲ್ಲಿ ನಮ್ಮ ಭಾರತೀಯ ಯುವಜನರಿಗೆ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ (ಎಐ) ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ ಮತ್ತು ಹೇರಳ ಅವಕಾಶಗಳು ಲಭ್ಯ ಎಂದು ಅಮೆರಿಕೆಯ ಐಟಿ ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ದತ್ತಾಂಶ ತಜ್ಞ ಕ್ರಿಶ್ ಬೇಂದ್ರೆ ಅಭಿಪ್ರಾಯಪಟ್ಟರು.
ನಗರದ ಶ್ರೀಮತಿ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಕೃತಕ ಬುದ್ಧಿಮತ್ತೆ ಎಐ ಹಾಗೂ ಕೋಡಿಂಗ್ ತಂತ್ರಾಂಶ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಐ ಸೌಲಭ್ಯಗಳ ಬಳಕೆಯಿಂದ, ವಿವಿಧ ಕಾರ್ಯಗಳನ್ನು ಪೂರ್ಣಗೊಳಿಸಲು ಬೇಕಾದ ಸಮಯವನ್ನು ಗಣನೀಯ ಕಡಿಮೆ ಮಾಡಬಹುದು. ಇದು ಬಹುಕಾರ್ಯವನ್ನು ಸಾಧ್ಯವಾಗಿಸುತ್ತದೆ. ಜತೆಗೆ ಲಭ್ಯವಿರುವ ಸಂಪನ್ಮೂಲಗಳ ಮೇಲಿನ ಬೇಡಿಕೆ ಹಗುರಗೊಳಿಸುತ್ತದೆ. ಹೆಚ್ಚಿನ ಹಣ ವ್ಯಯಿಸದೆ ಸಂಕೀರ್ಣವಾದ ಕೆಲಸಗಳನ್ನು ಪೂರ್ಣಗೊಳ್ಳಲು ಎಐ ಸಾಧ್ಯವಾಗಿಸುತ್ತದೆ ಎಂದರು.
ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಅರುಣ ಚರಂತಿಮಠ ಮಾತನಾಡಿ, ನಮ್ಮ ಶಾಲೆಯು ಸಿಬಿಎಸ್‌ಇಯ ಕೌಶಲ ಶಿಕ್ಷಣದಡಿ ಅನುಮತಿ ಹೊಂದಿದೆ. ಕೃತಕ ಬುದ್ಧಿಮತ್ತೆ ತಂತ್ರಾಂಶವನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡು 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವ ಈ ಭಾಗದ ಏಕೈಕ ಶಾಲೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.
ಶಾಲೆ ಪ್ರಾಚಾರ್ಯೆ ಅಶ್ವಿನಿ ಚಿಕ್ಕಬಳ್ಳಾಪುರ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನಿತ್ಯದ ಪಠ್ಯ ಶಿಕ್ಷಣದ ಹೊರತಾಗಿ ಇಂತಹ ವಿಶೇಷ ವಿಷಯಗಳನ್ನು ಸಂಬಂಧಿಸಿದ ವಿಷಯ ತಜ್ಞರನ್ನು ಶಾಲೆಗೆ ಆಹ್ವಾನಿಸಿ ಮಕ್ಕಳಿಗೆ ವಿಶೇಷ ಜ್ಞಾನ ಪೂರೈಸುವ ಕ್ರಿಯೆಯನ್ನು ನಡೆಸುತ್ತಿದ್ದೇವೆ ಎಂದರು.
ಮೂಲತಃ ಧಾರವಾಡದವರೇ ಆದ, ಕಳೆದ 40 ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿರುವ ಕ್ರಿಶ್ ಬೇಂದ್ರೆ ಅವರನ್ನು ಶಾಲೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಶಾಲೆ ಆಡಳಿತಾಧಿಕಾರಿ ಸೋಮೇಶ ಗಂಗಣ್ಣವರ, ಅಧ್ಯಾಪಕ ಅರ್ಷದ್ ಜಮಾದಾರ, ವಿದ್ಯಾರ್ಥಿಗಳು, ಇತರರು ಇದ್ದರು.