ಆರ್ಟಿಪಿಸಿಆರ್ ಟೆಸ್ಟ್ ಸೌಕರ್ಯ

Dr.Vikram
Published on

ಕಲಬುರಗಿ: ಕೇಂದ್ರ ಸರ್ಕಾರದ ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್​ ) ಅನುಮೋದಿತ ಆರ್ಟಿಪಿಸಿಆರ್ ಟೆಸ್ಟ್ ಸೌಲಭ್ಯ ನಗರದ ಪ್ರತಿಷ್ಠಿತ ಯುನೈಟೆಡ್ ಆಸ್ಪತ್ರೆಗೆ ಲಭಿಸಿದೆ. ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ ಖಾಸಗಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಹೊಂದಿರುವ ಏಕೈಕ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಯುನೈಟೆಡ್ ಪಾತ್ರವಾಗಿದೆ.
ಮಹಾಮಾರಿ ಕೋವಿಡ್-19 ಭಾರತದಲ್ಲಿ ದಿನೇದಿನೆ ಹೆಚ್ಚುತ್ತಲೇ ಸಾಗಿದೆ. ಕರ್ನಾಟಕ ಅದರಲ್ಲೂ ಕಲಬುರಗಿ ಸಹ ಹಿಂದೆ ಬಿದ್ದಿಲ್ಲ. ಈ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರದೊಂದಿಗೆ ಕೈಜೋಡಿಸಬೇಕೆಂಬ ಸಾಮಾಜಿಕ ಜವಾಬ್ದಾರಿಯೊಂದಿಗೆ ಆರ್ಟಿಪಿಸಿಆರ್ ಟೆಸ್ಟ್ ಸೌಲಭ್ಯ (ಅಲ್ಟ್ರಾಮಾಡರ್ನ ಮಾಲಿಕ್ಯೂಲರ್ ಬಯೋಲಜಿ ಲ್ಯಾಬ್) ಹೊಂದುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಯುನೈಟೆಡ್ ಆಸ್ಪತ್ರೆ ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕ ಡಾ.ವಿಕ್ರಮ ಸಿದ್ದಾರಡ್ಡಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಡಾ.ವಿಕ್ರಮ ಹೇಳಿದ್ದಿಷ್ಟು. ಅಲ್ಟ್ರಾ ಮಾಡೆಲ್ ಡೈಗ್ನೋಸ್ಟಿಕ್ ಲ್ಯಾಬ್ ಆರಂಭಿಸಲು ಜನವರಿಯಲ್ಲೇ ಯೋಜಿಸಿದ್ದೇವು. ಈ ಮಧ್ಯೆ ಕರೊನಾದಿಂದಾಗಿ ಲೌಕ್ಡೌನ್ ಜಾರಿಗೆ ಬಂದಿತು. ಲಾಕ್ಡೌನ್ ಅವಧಿಯಲ್ಲೇ ಬಹುತೇಕ ಪ್ರಕ್ರಿಯೆ ಶುರುವಾಯಿತು. ಮಷಿನ್, ಸ್ಕಿಲ್ಸ್, ನುರಿತ ಸಿಬ್ಬಂದಿ ಹೀಗೆ ವಿವಿಧ ಆಯಾಮಗಳಲ್ಲಿ ಎನ್ಎಬಿಎಲ್ ನೋಡಲ್ ಏಜೆನ್ಸಿ ಪರಿಶೀಲನೆ ನಡೆಸಿ ಗ್ರೀನ್ ಸಿಗ್ನಲ್ ನೀಡಿತು. ಇದಾದ ಬಳಿಕ ಐಸಿಎಂಆರ್ ನೋಡಲ್ ಏಜೆನ್ಸಿ ನಮಗೆ ಐದು ಟೆಸ್ಟ್ಗಳನ್ನು ನೀಡಿದ್ದು, ಸ್ಯಾಂಪಲ್ಸ್ ಟೆಸ್ಟ್ ರಿಪೋರ್ಟ ಪಡೆದು ಅನುಮೋದನೆ ನೀಡಿದೆ. ಹೀಗಾಗಿ ಕಲ್ಯಾಣ ಕರ್ನಾಟಕದ ನಮ್ಮ ಆಸ್ಪತ್ರೆಗೆ ಇದೊಂದು ಹೆಮ್ಮೆಯ ಸಂಗತಿ.

ರ್ಯಾಪಿಡ್ ಟೆಸ್ಟ್ ಸೌಲಭ್ಯ
ಕರ್ನಾಟಕ ಕೆಲ ಮೆಡಿಕಲ್ ಕಾಲೇಜುಗಳಲ್ಲಿ ರ್ಯಾಪಿಡ್ ಟೆಸ್ಟ್ ಸೌಲಭ್ಯ ಇದೆ. ಆದರೆ ನಮ್ಮದು ಈ ಸೌಲಭ್ಯ ಹೊಂದಿದ ಏಕೈಕ ಖಾಸಗಿ ಆಸ್ಪತ್ರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಸಹಕಾರ ಮರೆಯಲಾಗದು. ಬೆಂಗಳೂರು ಖಾಸಗಿ ಆಸ್ಪತ್ರೆಯೊಂದರ ಲ್ಯಾಬ್ನ ಚೀಫ್ ಆಪರೇಟಿಂಗ್ ಆಫೀಸರ್ ಡಾ.ಶಾಂತಕುಮಾರ ಮುರಡಾ, ಯುನೈಟೆಡ್ ಆಸ್ಪತ್ರೆ ಲ್ಯಾಬ್ ಮುಖ್ಯಸ್ಥೆ ಡಾ.ಆಯೇಷಾ ಫಾತಿಮಾ ಬಶೀರ್ ಅವರ ಶ್ರಮವೂ ಇದರಲ್ಲಿದೆ. ಕೋವಿಡ್ಗೆ ಸಂಬಂಧಿಸಿದಂತೆ ಎರಡು ತಿಂಗಳಿಂದ ರ್ಯಾಪಿಡ್ ಟೆಸ್ಟ್ ಮಾಡಲಾಗುತ್ತಿದ್ದು, 300ಕ್ಕೂ ಹೆಚ್ಚು ಜನ ತಪಾಸಣೆಗೆ ಒಳಗಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಪ್ರವೇಶ ಪಡೆಯುವ ಎಲ್ಲರಿಗೂ ಕೋವಿಡ್-19 ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಒಳರೋಗಿಗಳ ಹಿತರಕ್ಷಣೆ ದೃಷ್ಟಿಯಿಂದ ಇದನ್ನು ಅಳವಡಿಸಿಕೊಳ್ಳಲಾಗಿದೆ.

ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ
ಜಿಮ್ಸ್ ಆಸ್ಪತ್ರೆಯಲ್ಲಿ ಕರೊನಾ ಟೆಸ್ಟಿಂಗ್ ಒತ್ತಡ ಹೆಚ್ಚಿದ್ದು, ಸಾವಿರಾರು ಪ್ರಕರಣಗಳು ಟೆಸ್ಟ್ ಆಗಬೇಕಿದೆ. ಜಿಲ್ಲಾಡಳಿತ ಔಟಸೋರ್ಸ ಆಧಾರದ ಮೇಲೆ ಅವಕಾಶ ನೀಡಿದರೆ ಸರ್ಕಾರ ನಿಗದಿಪಡಿಸಿದ ದರದಲ್ಲೇ ತಪಾಸಣೆ ನಡೆಸಲು ಸಿದ್ಧರಿದ್ದೇವೆ. ಜತೆಗೆ ಇತರ ಖಾಸಗಿ ಆಸ್ಪತ್ರೆಗಳು ಬಯಸಿದರೂ ಟೆಸ್ಟ್ ಮಾಡಿಕೊಡಲಾಗುವುದು. ಕೋವಿಡ್-19 ಟೆಸ್ಟ್ ಸೌಲಭ್ಯ, ಇತರ ರೋಗಗಳ ತಪಾಸಣೆಗಾಗಿ ಆಧುನಿಕ ತಂತ್ರಜ್ಞಾನ ಪ್ರಯೋಗಾಲಯ ಹೊಂದಿರುವ ಈ ಲ್ಯಾಬ್ನಲ್ಲಿ ಗರ್ಭಿಣಿಯರೂ ಈ ಸೌಲಭ್ಯ ಪಡೆಯಬಹುದಾಗಿದೆ ಎಂದು ಡಾ.ವಿಕ್ರಮ ಸಿದ್ದಾರಡ್ಡಿ ತಿಳಿಸಿದರು.

ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಐಸಿಎಂಆರ್ ಅನುಮೋದಿತ ಕೋವಿಡ್ ಟೆಸ್ಟ್ ಸೌಲಭ್ಯ ಹೊಂದಿದ ಏಕೈಕ ಖಾಸಗಿ ಆಸ್ಪತ್ರೆ ಎಂಬ ಹೆಗ್ಗಳಿಕೆ ಸಂತಸ ತಂದಿದೆ. ಜಿಲ್ಲಾಡಳಿತ, ಸರ್ಕಾರದೊಂದಿಗೆ ಕೈಜೋಡಿಸಿ ಕರೊನಾಗೆ ಬ್ರೇಕ್ ಹಾಕುವ ಸಣ್ಣ ಪ್ರಯತ್ನ ನಮ್ಮದು. ಈ ಭಾಗದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸರ್ಕಾರ ನಿಗದಿಪಡಿಸಿದ ದರದಲ್ಲಿ ಟೆಸ್ಟ್ ಆಗಲಿದೆ.
| ಡಾ.ವಿಕ್ರಮ ಸಿದ್ದಾರಡ್ಡಿ
ಚೇರ್ಮನ್, ಯುನೈಟೆಡ್ ಆಸ್ಪತ್ರೆ ಕಲಬುರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net