ಆರ್‌ಎಸ್‌ಎಸ್‌ನಿಂದ ಪಥ ಸಂಚಲನ

18Rajesh10
Published on

ಚಾಮರಾಜನಗರ: ರಾಷ್ಟ್ರೀಯ ಸ್ವಯಂ ಸೇವಾ ಸಂಘದ(ಆರ್‌ಎಸ್‌ಎಸ್) ಶತಮಾನೋತ್ಸವ ಮತ್ತು ವಿಜಯದಶಮಿ ಪ್ರಯುಕ್ತ ಚಾಮರಾಜನಗರದಲ್ಲಿ ಶನಿವಾರ ಸಂಜೆ ಪಥ ಸಂಚಲನ ನಡೆಯಿತು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ಪಥದಲ್ಲಿ ದಂಡ ಸಹಿತ ಗಣವೇಶದಲ್ಲಿ ಶಿಸ್ತುಬದ್ಧವಾಗಿ ನಿಂತ ಸಂಘದ ಸ್ವಯಂ ಸೇವಕರು ಭಾಗವಧ್ವಜಕ್ಕೆ ಗೌರವ ಸಲ್ಲಿಸಿದರು. ಬಳಿಕ ನಮಸ್ತೆ ಸದಾ ವಸ್ಸುಲೇ ಪ್ರಾರ್ಥನಾ ಗೀತೆಯನ್ನು ಹಾಡಿದರು. ಮಾಜಿ ಶಾಸಕರಾದ ಸಿ.ಎಸ್.ನಿರಂಜನ್‌ಕುಮಾರ್ ಮತ್ತು ಎಸ್.ಬಾಲರಾಜು ಮತ್ತು ಇನ್ನಿತರರು ಸಾಮಾನ್ಯ ಕಾರ್ಯಕರ್ತರಲ್ಲಿ ಒಬ್ಬರಾಗಿ ನಿಂತಿದ್ದರು.

ಪ್ರಾರ್ಥನಾ ಗೀತೆ ಮುಗಿದ ಬಳಿಕ ಪಥ ಸಂಚಲನ ಆರಂಭವಾಯಿತು. ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಶ್ರೀಭುವನೇಶ್ವರಿ ವೃತ್ತಕ್ಕೆ ಪಥ ಸಂಚಲನ ಆಗಮಿಸಿದಾಗ ಸಂಘದ ಸ್ವಯಂ ಸೇವಕರಿಗೆ ಪುಷ್ಪ ಮಳೆ ಸುರಿಸಲಾಯಿತು. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಪಥ ಸಂಚಲನದಲ್ಲಿ ಚಿಕ್ಕ ಮಕ್ಕಳು ಸಹ ಭಾಗವಹಿಸಿ ಗಮನ ಸೆಳೆದರು. ಮಳೆಯ ನಡುವೆಯೂ ಸ್ವಯಂಸೇವಕರ ಸಂಚಾರ ಸಾಗಿತು. ಶ್ರೀಚಾಮರಾಜೇಶ್ವರ ದೇಗುಲದ ಮುಂಭಾಗ ಸಮಾಪ್ತಿಗೊಂಡಿತು.

ಬಂದ್ ಹಿನ್ನೆಲೆ ತಡವಾಗಿ ಆರಂಭ:

ಶನಿವಾರ ಮಧ್ಯಾಹ್ನ 3 ಗಂಟೆಗೆ ಶುರುವಾಗಬೇಕಿದ್ದ ಪಥ ಸಂಚಲನ ಚಾಮರಾಜನಗರ ಬಂದ್ ಹಿನ್ನೆಲೆಯಲ್ಲಿ ಸಂಜೆ ಶುರುವಾಯಿತು. ಪಥ ಸಂಚಲನದ ಪ್ರಯುಕ್ತ ಶ್ರೀಭುವನೇಶ್ವರಿ ವೃತ್ತದಲ್ಲಿ ಕೇಸರಿ ಬಂಟಿಂಗ್ಸ್ ಕಟ್ಟಲಾಗಿತ್ತು. ಆದರೆ ಇದಕ್ಕೆ ನಗರಸಭೆಯಿಂದ ಅನುಮತಿ ಪಡೆದಿಲ್ಲವೆಂಬ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ವಯಂಸೇವಕರೊಬ್ಬರು ಕೇಸರಿ ಬಂಟಿಂಗ್ಸ್ ತೆರವುಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net