

ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶದಲ್ಲಿ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಕೆಲಸ ಮಾಡುತ್ತಿದೆ. ಇದಕ್ಕಾಗಿ ರಾಷ್ಟ್ರಾದ್ಯಂತ 32 ಸಾವಿರ ಶಾಲೆಗಳನ್ನು ನಡೆಸುತ್ತಿದೆ. ಮುಖ್ಯವಾಗಿ ಮಕ್ಕಳಿಗೆ ಸಂಸ್ಕೃತಿ ಕಲಿಸಲಾಗುತ್ತಿದೆ ಎಂದು ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.
ಇಲ್ಲಿಯ ನವನಗರದ ಭಾರತೀಯ ಶಿಕ್ಷಣ ಪ್ರಸಾರ ಸಮಿತಿಯ ಭಗಿನಿ ನಿವೇದಿತಾ ವಿದ್ಯಾಲಯ ಆವರಣದಲ್ಲಿ ಮಂಗಳವಾರ ನೂತನ ಶಾಲೆ ಕಟ್ಟಡದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ವಿದ್ಯೆಯಿಂದ ಮನುಷ್ಯನಲ್ಲಿ ಪರಿವರ್ತನೆಯಾಗಬೇಕು. ದೇಶ ಸ್ವತಂತ್ರವಾದ ಕೂಡಲೇ ಅಂತಹ ಅಂಶಗಳಿರುವ ಒಳ್ಳೆಯ ಶಿಕ್ಷಣ ನೀತಿ ಬರಬೇಕಿತ್ತು. ಅನೇಕ ವರ್ಷಗಳ ನಂತರ ಹೊಸ ಶಿಕ್ಷಣ ನೀತಿ ಬಂದಿದೆ. ವಿದ್ಯೆಯಿಂದ ಶಾಶ್ವತ ದೃಷ್ಟಿ ಸಿಗಬೇಕು. ಈ ದೇಶದ ಮಣ್ಣಿನ ಗುಣ ಶಿಕ್ಷಣದಲ್ಲಿ ಇರಬೇಕು ಎಂಬ ಆಶಯಕ್ಕೆ ತಕ್ಕಂತೆ ನೀತಿ ಇದೆ. ಇದರ ಫಲ ಕಾಣಬೇಕಾದರೆ ಕನಿಷ್ಠ 20 ವರ್ಷ ಕಾಯಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಭಾರತೀಯ ಸಂಸ್ಕೃತಿ ಉಳಿಸಿಬೆಳೆಸಿ ಗಟ್ಟಿ ಮಾಡುವಲ್ಲಿ ಪರಿಶ್ರಮ ಪಡುತ್ತಿರುವ ಸಂಘ ಪರಿವಾರ ಯಶಸ್ವಿಯಾಗಿದೆ. ಸುಸಂಸ್ಕೃತ ಮಕ್ಕಳಿಂದ ದೇಶಕ್ಕೆ ಉತ್ತಮ ಭವಿಷ್ಯ ನೀಡಲು ಸಾಧ್ಯ ಎಂದು ಹೇಳಿದರು.
ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಸಮಾಜದ ಪರಿವರ್ತನೆಗೆ ಸಂಸ್ಕಾರಯುತ ಶಿಕ್ಷಣ ಅಗತ್ಯ. ರಾಷ್ಟ್ರೀಯತೆ ಕಲ್ಪನೆಯಡಿ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಮೆಕಾಲೆ ಶಿಕ್ಷಣ ನೀತಿ ಬದಲಾಗಬೇಕು ಎಂಬ ಕೂಗು ಇತ್ತು. ಅದು ಈಗ ಕೈಗೂಡುತ್ತಿದೆ. ದೇಶಿಯ ಶಿಕ್ಷಣ ವ್ಯವಸ್ಥೆಯಿಂದ ಮುಂದಿನ ದಿನಗಳಲ್ಲಿ ಬಹಳಷ್ಟು ಬದಲಾವಣೆ ನಿರೀಕ್ಷಿಸಬಹುದು ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಹುಬ್ಬಳ್ಳಿ -ಧಾರವಾಡ ಮಧ್ಯೆ ನವನಗರ ವೇಗವಾಗಿ ಬೆಳೆಯುತ್ತಿರುವ ಬಡಾವಣೆ. ಇಲ್ಲಿ ಭಾರತೀಯತೆ ಪಸರಿಸಲು ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ಶಾಲೆ ಕಟ್ಟಡ ಮಾದರಿಯಾಗಿ ನಿರ್ವಣವಾಗಲಿ ಎಂದು ಹಾರೈಸಿದರು.
ಸ್ವರ್ಣ ಸಮೂಹ ಸಂಸ್ಥೆಗಳ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಸ್ವಾತಂತ್ರ್ಯ ಪಡೆದು ಅನೇಕ ವರ್ಷಗಳವರೆಗೆ ಬ್ರಿಟಿಷ್ ಆಡಳಿತದ ಪ್ರಭಾವ ಇತ್ತು. ಇದೀಗ ಭಾರತ ಎಲ್ಲ ರಂಗದಲ್ಲಿ ಮುಂದೆ ಬರುತ್ತಿದ್ದು, ವಿಶ್ವಗುರುವಾಗುತ್ತಿದೆ. ‘ನಾನು ಭಾರತೀಯ’ ಎಂದು ಹೇಳಿಕೊಳ್ಳಲು ಎಲ್ಲರೂ ಅಭಿಮಾನ ಪಡುತ್ತಿದ್ದಾರೆ ಎಂದರು.
ಮೇಯರ್ ಈರೇಶ ಅಂಚಟಗೇರಿ, ಉದ್ಯಮಿ ಮಹದೇವ ಕರಮರಿ, ಡಾ. ಪಾಂಡುರಂಗ ಗಂಡಮಾಲಿ, ಈಶ್ವರ ಮಾಳಣ್ಣವರ, ಪಾಲಿಕೆ ಸದಸ್ಯರಾದ ಚಂದ್ರಶೇಖರ ಮನಗುಂಡಿ, ರಾಜಣ್ಣ ಕೊರವಿ, ವಿಜಯಾನಂದ ಶೆಟ್ಟಿ, ಸುನಿತಾ ಮಾಳವದಕರ, ಇತರರು ಇದ್ದರು.
ಸತೀಶ ದೀಕ್ಷಿತ ದಾನಿಗಳ ವಿವರ ನೀಡಿದರು. ಸತೀಶ ಮುರೂರು ನಿರೂಪಿಸಿದರು. ನರೇಂದ್ರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.